ಕಡೂರು | ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಆರೋಗ್ಯ ಕೇಂದ್ರದಲ್ಲಿ ಲೈಂಗಿಕ ದೌರ್ಜನ್ಯ: ಆರೋಪ

Update: 2023-11-10 16:44 GMT
ಸಾಂದರ್ಭಿಕ ಚಿತ್ರ 

ಕಡೂರು, ನ.10: ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಪ್ಯಾರಾ ನರ್ಸಿಂಗ್ ಕೋರ್ಸ್ ಕೆಲಸದ ಪರೀಕ್ಷೆ ಬರೆಯಲು ಅವಕಾಶ ಕೊಡಿಸುವುದಾಗಿ ನಂಬಿಸಿ ವಿದ್ಯಾರ್ಥಿನಿಯರಿಗೆ ಮತ್ತು ಬರೆಸುವ ಔಷಧ ನೀಡಿ ಲೈಂಗಿಕ ದೌರ್ಜನ್ಯ ನಡೆಸಿರುವ ಪ್ರಕರಣ ಕಡೂರು ತಾಲೂಕಿನ ಅಂಚೆಚೋಮನಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ. 

ಘಟನೆ ಸಂಬಂಧ ವಸತಿ ಶಾಲೆಯ ಡಿ ದರ್ಜೆ ನೌಕರ, ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷತಾ ಮಹಿಳಾ ಅಧಿಕಾರಿ ಹಾಗೂ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಮಹಿಳಾ ಅಧಿಕಾರಿಯ ಪ್ರಿಯಕರನನ್ನು ಕಡೂರು ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.

ತಾಲೂಕಿನ ಅಂಚೆಚೋಮನಹಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಡಿ ದರ್ಜೆ ನೌಕರ ಸುರೇಶ್, ಅಂಚೆಚೋಮನಹಳ್ಳಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಎಎನ್‍ಎಂ ಚಂದನಾ ಹಾಗೂ ಆತನ ಪ್ರಿಯಕರ ವಿನಯ್‍ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ.

ಅಂಚೆಚೋಮನಹಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಡಿ ದರ್ಜೆ ನೌಕರ ಸುರೇಶ್ ಎಂಬಾತ ಶಾಲೆಯ ವಿದ್ಯಾರ್ಥಿಯರಿಗೆ ಪ್ಯಾರಾ ಮೆಡಿಕಲ್ ಕೋರ್ಸ್‍ನ ಪರೀಕ್ಷೆ ಬರೆಯಲು ಅವಕಾಶ ಕೊಡಿಸುತ್ತೇನೆ, ಪರೀಕ್ಷೆಯಲ್ಲಿ ಪಾಸಾದಲ್ಲಿ ಕೆಲಸ ಸಿಗುತ್ತದೆ ಎಂದು ನಂಬಿಸುತ್ತಿದ್ದ. ಪರೀಕ್ಷೆ ಬರೆಯಲು ಮುಂದಾದ ವಿದ್ಯಾರ್ಥಿಯರ ಪೋಷಕರನ್ನೂ ನಂಬಿಸಿ ವಿದ್ಯಾರ್ಥಿನಿಯರನ್ನು ಅಂಚೆಚೋಮನಹಳ್ಳಿ ಗ್ರಾಮದಲ್ಲಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಚಂದನಾ ಬಳಿ ಬಿಡುತ್ತಿದ್ದ. ಚಂದನಾ ಆರೋಗ್ಯ ಕೇಂದ್ರಕ್ಕೆ ಬರುವ ವಿದ್ಯಾರ್ಥಿನಿಯರನ್ನು ಪುಸಲಾಯಿಸಿ ರಾತ್ರಿ ವೇಳೆ ಅಲ್ಲೇ ಉಳಿಸಿಕೊಂಡು ರಾತ್ರಿ ವೇಳೆ ಕಾಫಿ, ಟೀ ನಲ್ಲಿ ಮತ್ತು ಬರುವ ಔಷಧ ಮಿಶ್ರಣ ಮಾಡಿ ವಿದ್ಯಾರ್ಥಿನಿಯರಿಗೆ ನೀಡುತ್ತಿದ್ದಳು. ಈ ವೇಳೆ ಅರೆಪ್ರಜ್ಞಾ ಸ್ಥಿತಿಯಲ್ಲಿರುವ ವಿದ್ಯಾರ್ಥಿನಿಯ ಮೇಲೆ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಚಂದನಾಳ ಪ್ರಿಯಕರ ವಿನಯ್‍ಕುಮಾರ್ ಎಂಬಾತ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂದು ಆರೋಪಿಸಲಾಗಿದೆ.

ಅಂಚೆಚೋಮನಹಳ್ಳಿಯಲ್ಲಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ವಿದ್ಯಾರ್ಥಿನಿಯರು ಬರುವುದು, ಹೋಗುವುದನ್ನು ಗಮನಿಸಿದ ಗ್ರಾಮಸ್ಥರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದ್ದು, ಗ್ರಾಮಸ್ಥರು ಹಾಗೂ ಪೊಲೀಸರಿಗೆ ತಮ್ಮ ಕೃತ್ಯದ ಬಗ್ಗೆ ಅನುಮಾನ ಬಂದಿರುವುದು ಖಾತ್ರಿಯಾಗುತ್ತಿದ್ದಂತೆ ಚಂದನಾ ಮತ್ತು ವಸತಿ ಶಾಲೆಯ ಡಿ ದರ್ಜೆ ನೌಕರ ನಾಪತ್ತೆಯಾಗಿ ತಲೆಮರೆಸಿಕೊಂಡಿದ್ದರು. ಬುಧವಾರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳು ವಸತಿ ಶಾಲೆಯ ಬಾಲಕಿಯರಿಗೆ ಮತ್ತು ಬರೆಸುವ ಔಷಧ ನೀಡಿದ ನಂತರ ವಿನಯ್‍ಕುಮಾರ್ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಎಂಬುದನ್ನು ಒಪ್ಪಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಆರೋಪಿಗಳು ವಸತಿ ಶಾಲೆಯ ಹಲವು ವಿದ್ಯಾರ್ಥಿನಿಯರನ್ನು ಈ ಕೃತ್ಯಕ್ಕೆ ಬಳಸಿಕೊಂಡಿದ್ದು, ಪರೀಕ್ಷೆ ಬರೆಯಲು ಒಪ್ಪಿಕೊಂಡ ವಿದ್ಯಾರ್ಥಿನಿಯರ ಪೋಷಕರ ಬಳಿ ಡಿ ದರ್ಜೆ ನೌಕರ ಸುರೇಶ್ ಸಂಪರ್ಕ ಸಾಧಿಸಿ, ಪರೀಕ್ಷೆ ಬರೆಯಲು ಪೋಷಕರಿಂದ ಅನುಮತಿ ಪಡೆಯುತ್ತಿದ್ದ. ಇದರಿಂದಾಗಿ ಆರೋಪಿಗಳ ಕೃತ್ಯದ ಬಗ್ಗೆ ಯಾರಿಗೂ ಅನುಮಾನ ಬರುತ್ತಿರಲಿಲ್ಲ. ಪರೀಕ್ಷೆಯ ನೆಪದಲ್ಲಿ ಪ್ರತೀ ಬಾರಿ ಒಬ್ಬೊಬ್ಬರನ್ನೇ ಚಂದನಾ ಬಳಿ ಬಿಡುತ್ತಿದ್ದ. ತಮ್ಮ ಮೇಲಾದ ಲೈಂಗಿಕ ದೌರ್ಜನ್ಯ ಕೃತ್ಯದ ಬಗ್ಗೆ ವಿದ್ಯಾರ್ಥಿನಿಯರು ಭೀತಿಯಿಂದ ಯಾರಲ್ಲೂ ಹೇಳಿಕೊಂಡಿಲ್ಲ. ಕಳೆದ 2-3 ತಿಂಗಳಿನಿಂದ ಈ ಕೃತ್ಯ ನಡೆಯುತ್ತಿದೆ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

'ಡಿ ದರ್ಜೆ ನೌಕರ ಸುರೇಶ್ ಹೊರ ಗುತ್ತಿಗೆ ಮೇಲೆ ಕೆಲಸ ಮಾಡುತ್ತಿದ್ದ. ಆತನನ್ನು ಈಗಾಗಲೇ ಮೇಲಧಿಕಾರಿಗಳು ಕೆಲಸದಿಂದ ತೆಗೆದು ಹಾಕಿದ್ದಾರೆ. ಆತನಿಗೂ ಶಾಲೆಗೂ ಯಾವುದೇ ಸಂಬಂಧ ಇಲ್ಲ'

- ಶೈಲಾ, ವಸತಿ ಶಾಲೆಯ ಪ್ರಾಂಶುಪಾಲೆ

-------------------------------------------------------

'ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಚಂದನಾರನ್ನು ಜಿಲ್ಲಾ ಆರೋಗ್ಯಾಧಿಕಾರಿ ಕೆಲಸದಿಂದ ಅಮಾನತು ಮಾಡಿದ್ದು, ಇಲಾಖೆ ವತಿಯಿಂದ ಮುಂದಿನ ಕ್ರಮ ಜರುಗಿಸಲಾಗುವುದು'

- ರವಿಕುಮಾರ್, ತಾಲೂಕು ವೈದ್ಯಾಧಿಕಾರಿ

-------------------------------------------------------------

'ವಸತಿ ಶಾಲೆಯ ಬಾಲಕಿಯರ ಮೇಲೆ ಲೌಂಗಿಕ ದೌರ್ಜನ್ಯ ನಡೆಸಿರುವ ಕೃತ್ಯ ತನಿಖೆಯಿಂದ ಬಹಿರಂಗವಾಗಿದೆ. ಆರೋಪಿಗಳ ವಿರುದ್ಧ ಪೊಕ್ಸೊ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಘಟನೆ ಸಂಬಂಧ ಸಮಗ್ರವಾಗಿ ತನಿಖೆ ನಡೆಸಲಾಗುತ್ತಿದ್ದು, ವಸತಿ ಶಾಲೆಯಲ್ಲಿನ ಕೆಲ ವಿದ್ಯಾರ್ಥಿಗಳ ಹೇಳಿಕೆ ಪಡೆಯಲಾಗಿದ್ದು, ಸಂತ್ರಸ್ತರು ಈ ಸಂಬಂಧ ಹೆಚ್ಚಿನ ಮಾಹಿತಿ, ದೂರು ನೀಡಿದಲ್ಲಿ ತನಿಖೆಗೆ ಸಹಕಾರ ಆಗಲಿದೆ'

- ಹಾಲಮೂರ್ತಿ, ಡಿವೈಎಸ್ಪಿ, ತರೀಕೆರೆ ವಿಭಾಗ

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News