ಕಳಸಾ-ಬಂಡೂರಿ ಯೋಜನೆ : ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಪತ್ರ
ಬೆಂಗಳೂರು : ಉತ್ತರ ಕರ್ನಾಟಕ ಭಾಗದ ಕಳಸಾ-ಬಂಡೂರಿ ನಾಲಾ ಯೋಜನೆಗೆ ‘ರಾಷ್ಟ್ರೀಯ ವನ್ಯಜೀವಿ ಮಂಡಳಿ’ಯ ಅನುಮತಿ ಕೊಡಿಸಲು ಮಧ್ಯಪ್ರವೇಶಿಸಬೇಕು ಎಂದು ಕೋರಿ ಪ್ರಧಾನಿ ಮೋದಿಯವರಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಗುರುವಾರ ಈ ಸಂಬಂಧ ಪತ್ರ ಬರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಂತರಾಜ್ಯ ಜಲ ವಿವಾದಗಳನ್ನು ಬಗೆಹರಿಸುವಲ್ಲಿ ಕೇಂದ್ರ ಸರಕಾರದ ಪಾತ್ರ ಮಹತ್ವದ್ದು. ರಾಷ್ಟ್ರೀಯ ಮಹತ್ವದ ಕುಡಿಯುವ ನೀರಿನ, ವಿದ್ಯುತ್ ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಿದರೆ ಮಾತ್ರ ಅಭಿವೃದ್ಧಿ ಸಾಧ್ಯ. ಆದುದರಿಂದ ಯೋಜನೆಗಳಿಗೆ ತ್ವರಿತ ಅನುಮೋದನೆ ಅಗತ್ಯ. ಜತೆಗೆ ಅಂತರಾಜ್ಯಗಳ ಸಹಕಾರವು ಬೇಕು ಎಂದು ತಿಳಿಸಿದ್ದಾರೆ.
ಆದರೆ, ಕರ್ನಾಟಕದ ಕುಡಿಯುವ ನೀರಿನ ಯೋಜನೆಗೆ ಗೋವಾ ರಾಜ್ಯ, ಸುಪ್ರೀಂಕೋರ್ಟ್‍ನಲ್ಲಿ ತಕರಾರು ಎತ್ತಿದೆ. ನಮ್ಮ ಯೋಜನೆ ಹಳೆಯ ಮತ್ತು ನ್ಯಾಯ ಸಮ್ಮತ ಯೋಜನೆಯಾಗಿದ್ದು, ವನ್ಯಜೀವಿಗಳಿಗೆ ಹಾನಿ ಮಾಡುವುದಿಲ್ಲ. ಒಂದು ವೇಳೆ ಗೋವಾ ರಾಜ್ಯ ಇದೇ ಧೋರಣೆ ಮುಂದುವರಿಸಿದರೆ ಗೋವಾ-ತಾಮ್ನಾರ್ ವಿದ್ಯುತ್ ಪ್ರಸರಣ ಮಾರ್ಗದ ಯೋಜನೆಗೆ ಕರ್ನಾಟಕ ನೀಡಿದ್ದ ಅನುಮತಿಯನ್ನು ಪುನರ್ ಪರಿಶೀಲಿಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ಮಹದಾಯಿ ನ್ಯಾಯಾಧೀಕರಣ ಕರ್ನಾಟಕಕ್ಕೆ ಒಟ್ಟು 13.42 ಟಿಎಂಸಿ ನೀರನ್ನು ಹಂಚಿಕೆಯಾಗಿದೆ. ಆಪೈಕಿ 3.9 ಟಿಎಂಸಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ (ಕಳಸಾ ನಾಲಾದಿಂದ 1.72 ಟಿಎಂಸಿ ಮತ್ತು ಬಂಡೂರ ನಾಲಾದಿಂದ 2.18 ಟಿಎಂಸಿ) ಯೋಜನೆ ಮಾರ್ಪಡಿಸಿ ಕ್ರಿಯಾ ಯೋಜನೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಯೋಜನೆ ಸಾಧ್ಯತೆಗಳಿಗೆ ಸಂಬಂಧಿಸಿದಂತೆ ಎಲ್ಲ ವಿವರಗಳನ್ನು ಒದಗಿಸಲಾಗಿದೆ. ಆದರೂ, ಇಲ್ಲಿಯವರೆಗೆ ತಾವು ಅಧ್ಯಕ್ಷರಾಗಿರುವ ವನ್ಯಜೀವಿ ರಾಷ್ಟ್ರೀಯ ಮಂಡಳಿಯು ಅಗತ್ಯ ಅನುಮತಿಯನ್ನು ನೀಡಿಲ್ಲ. ಈ ಮಧ್ಯೆ ಗೋವಾ ರಾಜ್ಯವು ಕಳಸಾ-ಬಂಡೂರಿಯಲ್ಲಿ ಕರ್ನಾಟಕ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳದಂತೆ ಆದೇಶವನ್ನು ಹೊರಡಿಸಿದೆ ಎಂದು ಸಿದ್ದರಾಮಯ್ಯ ಗಮನ ಸೆಳೆದಿದ್ದಾರೆ.