ಕಲ್ಲಡ್ಕ ಪ್ರಭಾಕರ್ ಭಟ್ ನಿರೀಕ್ಷಣಾ ಜಾಮೀನು ಅರ್ಜಿ: ಜನವರಿ 17 ಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಾಲಯ

Update: 2024-01-10 12:48 GMT

ಬೆಂಗಳೂರು: ಶ್ರೀರಂಗಪಟ್ಟಣ 3ನೇ ಅಪರ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ದೂರುದಾರೆ ನಜ್ಮಾ ನಝೀರ್ ಚಿಕ್ಕನೇರಳೆಯವರ ಪರವಾಗಿ ಬೆಂಗಳೂರಿನ ಹಿರಿಯ ವಕೀಲ ಎಸ್ ಬಾಲನ್ ವಿಸ್ತೃತವಾಗಿ ವಾದ ಮಂಡಿಸಿದರು.

"ಸುಪ್ರಿಂ ಕೋರ್ಟ್ ಮತ್ತು ಹಲವು ಹೈಕೋರ್ಟ್ ಗಳ ತೀರ್ಪುಗಳ ಪ್ರಕಾರ ಆರೋಪಿ ಕಲ್ಲಡ್ಕ ಪ್ರಭಾಕರ್ ಭಟ್ ನಿರೀಕ್ಷಣಾ ಜಾಮೀನಿಗೆ ಅನರ್ಹನಾಗಿದ್ದಾರೆ. ದೇಶದ ಭದ್ರತೆ, ಸೌಹಾರ್ದತೆಗೆ ಈ ಆರೋಪಿ ಕಂಟಕವಾಗಿದ್ದಾರೆ. ಈ ಹಿಂದಿನ ಐಪಿಸಿ ಮಾತ್ರವಲ್ಲ, ಈಗಿನ ನ್ಯಾಯ ಸಂಹಿತಾ ಮತ್ತು ಸಾಕ್ಷ್ಯ ಅಧಿನಿಯಮದ ಪ್ರಕಾರವೂ ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ ನಿರೀಕ್ಷಣಾ ಜಾಮೀನಿಗೆ ಅನರ್ಹನಾಗಿದ್ದಾರೆ" ಎಂದು ಕಾನೂನು, ಕಾಯ್ದೆಗಳನ್ನು ಉಲ್ಲೇಖಿಸಿ ವಾದ ಮಂಡಿಸಿದ್ದಾರೆ.

"ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ ದೇಶ ಒಡೆಯುವ ಸಂಘಟಿತ ಕೃತ್ಯ ಮಾಡಿದ್ದಾರೆ. ಆ ಕಾರಣಕ್ಕಾಗಿ ಅವರ ವಿರುದ್ದ ಹೆಚ್ಚುವರಿಯಾಗಿ ಕೋಕಾ ಅ್ಯಕ್ಟ್ ಮತ್ತು ಯುಎಪಿಎ ಅ್ಯಕ್ಟ್, ಟೆರರಿಸ್ಟ್ ಅ್ಯಕ್ಟ್ ಗಳನ್ನು ಸೇರಿಸಬೇಕಿದೆ. ಆದ್ದರಿಂದ ಆರೋಪಿ ಪೊಲೀಸ್ ಕಸ್ಟಡಿಗೆ ಕೊಡಬೇಕು. ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ಟನು ಹೇಳಿರುವ ಹೇಳಿಕೆಯನ್ನು ಆತನಿಂದ ದೃಢಪಡಿಸಿಕೊಂಡು, ಹೇಳಿಕೆಯ ಮಾದರಿ ಪಡೆದುಕೊಂಡು ಫಾರೆನ್ಸಿಕ್ ಲ್ಯಾಬ್ ಗೆ ಕಳಿಸಬೇಕಿದೆ. ಆರೋಪಿ ಮೇಲೆ ರೌಡಿ ಶೀಟ್ ತೆರೆಯಲು ಎಲ್ಲ ಆಧಾರಗಳಿದ್ದು, ಇವುಗಳ ಹಿನ್ನಲೆಯಲ್ಲಿ ಆರೋಪಿಯನ್ನು ತನಿಖೆಗೆ ಒಳಪಡಿಸಬೇಕಿದೆ. ಹಾಗಾಗಿ ಜಾಮೀನು ನಿರಾಕರಿಸಬೇಕು" ಎಂದು ವಾದ ಮಂಡಿಸಿದರು.

ಕಲ್ಲಡ್ಕ ಪ್ರಭಾಕರ ಭಟ್ ಪರ ವಕೀಲರು ಮತ್ತು ಸರ್ಕಾರಿ ವಕೀಲರು ವಾದ ಮಂಡಿಸಿದರು. ದೂರುದಾರರ ಪರವಾಗಿ ಹಿರಿಯ ವಕೀಲರಾದ ಎಸ್ ಬಾಲನ್ ಮತ್ತು ಲಕ್ಷ್ಮಣ ಚೀರನಹಳ್ಳಿ ಉಪಸ್ಥಿತರಿದ್ದರು. ನಿರೀಕ್ಷಣಾ ಜಾಮೀನಿನ ಅರ್ಜಿಯ ಬಗೆಗಿನ ವಾದ ಮುಕ್ತಾಯಗೊಂಡಿದ್ದು ಆದೇಶವನ್ನು ಜನವರಿ 17 ಕ್ಕೆ ಕಾಯ್ದಿರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News