ಕಲ್ಯಾಣ ಕರ್ನಾಟಕ ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಗೆ ಆರೆಸ್ಸೆಸ್‌ ಹಿನ್ನಲೆಯ ಗುರುರಾಜ ಕರಜಗಿ ಅಧ್ಯಕ್ಷತೆ

Update: 2024-10-05 10:57 GMT

ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಅರ್‌ಡಿಬಿ) ಅಡಿಯಲ್ಲಿ ರಚಿಸಲಾಗಿದ್ದು, ಸಮಿತಿಯ ನೇತೃತ್ವವನ್ನು ಆರೆಸ್ಸೆಸ್‌ ಹಿನ್ನೆಲೆಯ ಗುರುರಾಜ ಕರಜಗಿ ಅವರಿಗೆ ನೀಡಲಾಗಿದೆ.

ಗುರುರಾಜ ಅವರಿಗೆ ಸಮಿತಿಯ ನೇತೃತ್ವ ನೀಡಿರುವುದಕ್ಕೆ ರಾಜ್ಯ ಸರಕಾರದ ವಿರುದ್ಧ ಸಾಕಷ್ಟು ಟೀಕೆ, ವಿರೋಧಗಳು ವ್ಯಕ್ತವಾಗುತ್ತಿವೆ. ಬಿಜೆಪಿ-ಆರೆಸ್ಸೆಸ್ ಸಿದ್ಧಾಂತವನ್ನು ಪ್ರತಿಪಾದಿಸುವ‌ ಗುರುರಾಜ ಕರಜಗಿ ಅವರ ಆಯ್ಕೆಯು ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಗುಣಮಟ್ಟದ ಸುಧಾರಣಾ ಸಮಿತಿಯಿಂದ ಗುರುರಾಜ ಕರಜಗಿ ಅವರನ್ನು ಕೈಬಿಡುವಂತೆ ಕೇಂದ್ರೀಯ ವಿಶ್ವ ವಿದ್ಯಾಲಯದ ಅಂಬೇಡ್ಕರ್ ವಿದ್ಯಾರ್ಥಿಗಳ ಸಂಘಟನೆ ಒತ್ತಾಯಿಸಿದೆ.

ಗುರುರಾಜ ಕರಜಗಿ ಕೇವಲ ಭಾವನಾತ್ಮಕ ಮಾತುಗಳ ಮೂಲಕವೇ ಸಾಮಾನ್ಯ ಜನರನ್ನು ಮೂಡರನ್ನಾಗಿಸುವಲ್ಲಿ ನಿಸ್ಸಿಮರು. ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಗುಣಮಟ್ಟದ ಸುಧಾರಣಾ ಸಮಿತಿಗೆ ಸರಕಾರವು ಮನುವಾದದ ಪ್ರತಿಪಾದಕರನ್ನು ನೇಮಿಸಿರುವುದು ಒಪ್ಪಲಾಗದು, ಹೀಗಾಗಿ ಸಮಿತಿಯಿಂದ ಅವರನ್ನು ಕೈಬಿಡಬೇಕು ಎಂದು ಕೇಂದ್ರೀಯ ವಿಶ್ವ ವಿದ್ಯಾಲಯದ ಅಂಬೇಡ್ಕರ್ ವಿದ್ಯಾರ್ಥಿಗಳ ಸಂಘಟನೆ ಒತ್ತಾಯಿಸಿದೆ.

ಗುರುರಾಜ ಕರಜಗಿ ಸನಾತನ ಪ್ರತಿಪಾದಕ, ಅವಕಾಶವಾದಿ ಹಾಗೂ ಸಂಘ ಪರಿವಾರದ ವ್ಯಕಿ ಎನ್ನುವುದು ಈಗಾಗಲೇ ನಾಡಿನ ಪ್ರಜ್ಞಾವಂತ ನಾಗರಿಕರಿಗೆ ತಿಳಿದಿದೆ. ಅವರು ಕೇಶವ ಕೃಪೆಯಿಂದ ಕರ್ನಾಟಕದ ವಿವಿಧೆಡೆ ಕಾರ್ಯಕ್ರಮಗಳು ಆಯೋಜನೆಗಳ ಮೂಲಕವೇ ಇವತ್ತು ಶಿಕ್ಷಣ ತಜ್ಞರಾದವರು ಎಂದು ಸಂಘಟನೆಯ ಮುಖಂಡ ಹಾಗೂ ಸಂಶೋಧನಾ ವಿದ್ಯಾರ್ಥಿ ನಂದಕುಮಾರ್ .ಪಿ ದೂರಿದ್ದಾರೆ.

ಇತ್ತೀಚೆಗೆ ರಾಜ್ಯ ಸರಕಾರ ಕೈಗೊಳ್ಳುತ್ತೀರುವ ಈ ರೀತಿಯ ನಿರ್ಧಾದಿಂದ ಬಹುತೇಕರು ರಾಜ್ಯ ಸರಕಾರವನ್ನು ಅನುಮಾನದಿಂದ ಮತ್ತು ಅಸಹನೆಯಿಂದ ನೋಡುವಂತ ಪರಿಸ್ಥಿತಿ ಬಂದೊದಗಿದೆ. ಇದು ಈ ಸರಕಾರದ ನೈತಿಕತೆ ಕುಸಿತವನ್ನು ಎತ್ತಿ ತೋರಿಸುವಂತೆ ಕಾಣುತ್ತಿದೆ. ಬಹಳ ಸೂಕ್ಷ್ಮವಾಗಿ ಗಮನಿಸಿದರೆ, ನಮ್ಮ ರಾಜಕೀಯ ಚಿಂತನೆಯಲ್ಲೇ ಆಗಿರುವ ಬಹುದೊಡ್ಡ ಲೋಪವನ್ನು ತೋರಿಸುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಶೈಕ್ಷಣಿಕ ಗುಣಮಟ್ಟದ ಸುಧಾರಣೆ ಸಮಿತಿಗೆ ನೇಮಕಗೊಂಡ ಗುರುರಾಜ್ ಕರಜಗಿಯವರನ್ನು ಕೈಬಿಟ್ಟು, ರಾಜ್ಯದ ಹಿರಿಯ ಬುದ್ಧಿಜೀವಿಗಳ, ಸಾಹಿತಿಗಳ ಸಲಹೆಗಳನ್ನು ಪಡೆದು ಸಮಿತಿ ಸದಸ್ಯರನ್ನು ನೇಮಕ ಮಾಡುವುದು ಒಳಿತು ಎಂದು ಅವರು ಸರಕಾರಕ್ಕೆ ಮನವಿ ಮಾಡಿದ್ದಾರೆ.

ಕಲಬುರಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಾಲಾ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಈ ಭಾಗದ ಎಸ್ಸೆಸ್ಸೆಲ್ಸಿ ಫಲಿತಾಂಶ ಸೇರಿದಂತೆ ಶಿಕ್ಷಣ ಕ್ಷೇತ್ರ ಸುಧಾರಣೆ ಸಂಬಂಧ ಡಾ.ಗುರುರಾಜ ಕರಜಗಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದು ಶುಕ್ರವಾರ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್ ಮಾಹಿತಿ ನೀಡಿದರು.

ಈ ಸಮಿತಿಯ ಸದಸ್ಯರಾಗಿ ಅಜೀಂ ಪ್ರೇಮ್‌ ಜಿ ಫೌಂಡೆಷನ್ ಸಂಸ್ಥೆಯ ಡಾ.ರುದ್ರೇಶ, ಡಾ.ಹಿರೇಮಠ ಸ್ವಾಮೀಜಿ, ಬಳ್ಳಾರಿಯ ಫಾದರ್ ಫ್ರಾಂಸಿಸ್ ಹಾಗೂ ಬೀದರ್‌ನ ಶಾಹಿನ್ ಸಂಸ್ಥೆಗಳ ಅಧ್ಯಕ್ಷ ಡಾ.ಅಬ್ದುಲ್‌ ಖದೀರ್‌ ಇದ್ದು, ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ಎನ್.ಬಿ ಪಾಟೀಲ್ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News