ಸಿಬಿಎಸ್‍ಸಿ, ಸಿಐಎಸ್‍ಸಿಇ ಪಠ್ಯಕ್ರಮಕ್ಕೆ ಕನ್ನಡ ಕಡ್ಡಾಯ: ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2023-08-03 15:36 GMT

ಬೆಂಗಳೂರು, ಆ.3: ಸಿಬಿಎಸ್‍ಸಿ ಮತ್ತು ಸಿಐಎಸ್‍ಸಿಇ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಿ ಕಾನೂನು ರೂಪಿಸಿರುವ ರಾಜ್ಯ ಸರಕಾರದ ಕ್ರಮ ಪ್ರಶ್ನಿಸಿ ಹಲವು ಮಕ್ಕಳ ಪೋಷಕರು ಸಲ್ಲಿಸಿದ್ದ ಅರ್ಜಿ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಗುರುವಾರ ಈ ಕುರಿತಂತೆ ಸಿ.ಸೋಮಶೇಖರ್ ಎಂಬುವರು ಸೇರಿದಂತೆ 19 ಮಂದಿ ಪೋಷಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ. ಕನ್ನಡ ಭಾಷೆ ಕಲಿಕೆ(ಕೆಎಲ್‍ಎಲ್) ಕಾಯಿದೆ ಮತ್ತು ನಿಯಮಗಳು ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವೀತಿಯ ಭಾಷೆಯಾಗಿ ಕಡ್ಡಾಯಗೊಳಿಸುತ್ತವೆ. ಆದರೆ, ಕರ್ನಾಟಕ ಶಿಕ್ಷಣ ಸಂಸ್ಥೆಗಳು(ನಿರಾಕ್ಷೇಪಣಾ ಪ್ರಮಾಣ ಪತ್ರ ಮತ್ತು ನಿಯಂತ್ರಣ) ನಿಯಮ 2022ರ ಪ್ರಕಾರ ಎರಡನೆ ಅಥವಾ ಮೂರನೆ ಭಾಷೆಯಾಗಿ ಕಡ್ಡಾಯ ಎಂಬುದಾಗಿ ತಿಳಿಸುತ್ತವೆ. ಈ ಅಂಶಗಳು ಕರ್ನಾಟಕ ಶಿಕ್ಷಣ ಕಾಯಿದೆ 1983ಕ್ಕೆ ತದ್ವಿರುದ್ಧವಾಗಿವೆ.

ಅಲ್ಲದೆ, ಈ ಕಾಯಿದೆಗಳು, ಸೆಂಟ್ರಲ್ ಬೋರ್ಡ್ ಆಫ್ ಎಜುಕೇಷನ್(ಸಿಬಿಎಸ್‍ಸಿ) ಮತ್ತು ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಆಫ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್‍ಸಿಇ) ವ್ಯಾಪ್ತಿಯಿಂದ ಹೊರಗಡೆ ಇವೆ. ಅಷ್ಟೇ ಅಲ್ಲದೆ, ಕರ್ನಾಟಕ ಶಿಕ್ಷಣ ಕಾಯಿದೆ 1998ರ ತಿದ್ದುಪಡಿ ಮಾಡುವ ಮೂಲಕ ಸಿಬಿಎಸ್‍ಸಿ ಮತ್ತು ಸಿಐಎಸ್‍ಸಿಇ ಶಾಲೆಗಳು ಮತ್ತು ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶುಲ್ಕ ನಿಗಧಿ ಮಾಡುವುದಕ್ಕೆ ಅವಕಾಶ ಕಲ್ಪಿಸಿದ್ದ ನಿಯಮಗಳನ್ನು ಅಸಾಂವಿಧಾನಿಕ ಎಂದು ಹೈಕೋರ್ಟ್‍ನ ವಿಭಾಗೀಯ ಪೀಠ ಇತ್ತೀಚೆಗೆ ಆದೇಶಿಸಿದೆ.

ಆದರೂ ರಾಜ್ಯ ಸರಕಾರ ಕೆಎಲ್‍ಎಲ್ ಕಾಯಿದೆ 2015ರ ನಿಯಮ 2017 ಮತ್ತು ಕರ್ನಾಟಕ ಶಿಕ್ಷಣ ಸಂಸ್ಥೆಗಳು(ನಿರಾಕ್ಷೇಪಣಾ ಪ್ರಮಾಣ ಪತ್ರ ಮತ್ತು ನಿಯಂತ್ರಣ) ನಿಯಮ 2022ರ ಪ್ರಕಾರ ಸಿಬಿಎಸ್‍ಸಿ ಮತ್ತು ಸಿಐಎಸ್‍ಸಿಇ ಶಾಲೆಗಳು ಸೇರಿದಂತೆ ಎಲ್ಲ ಶಾಲೆಗಳಲ್ಲಿ 1 ರಿಂದ 10ನೆ ತರಗತಿಯವರೆಗೂ ಕನ್ನಡ ಕಡ್ಡಾಯ ಮಾಡಿವೆ. ಹೀಗಾಗಿ, ಎರಡೂ ಕಾಯಿದೆಗಳನ್ನು ರದ್ದು ಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News