ಡಿ.ಕೆ. ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ಹಿಂಪಡೆಯಲು ಸಚಿವ ಸಂಪುಟ ನಿರ್ಧಾರ
ಬೆಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ವಿರುದ್ಧ ಹಿಂದಿನ ಬಿಜೆಪಿ ಸರಕಾರ ಸಿಬಿಐ ತನಿಖೆ ನಡೆಸಲು ನೀಡಿದ್ದ ಅನುಮತಿಯನ್ನು ರದ್ದುಗೊಳಿಸಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ಹಿಂಪಡೆಯುವ ಸಂಬಂಧ ಒಳಾಡಳಿತ ಇಲಾಖೆ ಸಲ್ಲಿಸಿದ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ ನಡೆಸಲು ಹಿಂದಿನ ಬಿಜೆಪಿ ಸರಕಾರದ ಮುಖ್ಯಮಂತ್ರಿ ಮೌಖಿಕ ಆದೇಶ ನೀಡಿದ್ದರು. ಆದರೆ, ಈ ಸಂಬಂಧ ಸ್ಪೀಕರ್ ಅವರ ಅನುಮತಿ ಪಡೆಯದೆ ಸಿಬಿಐ ತನಿಖೆಗೆ ನೀಡಿದ್ದು ಕಾನೂನು ಬಾಹಿರ ಕ್ರಮವಾಗಿದೆ ಎಂದರು.
ಆದುದರಿಂದ, ಹಿಂದಿನ ಅಡ್ವೊಕೇಟ್ ಜನರಲ್ ಹಾಗೂ ಈಗಿರುವ ಅಡ್ವೊಕೇಟ್ ಜನರಲ್ ಅವರು ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಸಚಿವ ಸಂಪುಟ ಗಂಭೀರವಾಗಿ ಪರಿಗಣಿಸಿ, ಸ್ಪೀಕರ್ ಅನುಮತಿ ಪಡೆಯದೆ ನಿಯಮ ಬಾಹಿರವಾಗಿ ಕೈಗೊಂಡ ಕ್ರಮವಾದ ಕಾರಣ ಈ ತನಿಖೆ ಆದೇಶವನ್ನು ಹಿಂಪಡೆಯಲು ನಿರ್ಧಾರ ಕೈಗೊಳ್ಳಲಾಗಿದೆ. ಇನ್ನೆರಡು ದಿನಗಳಲ್ಲಿ ಈ ಸಂಬಂಧ ಆಡಳಿತಾತ್ಮಕ ಆದೇಶ ಹೊರಡಿಸಲಾಗುವುದು ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಸಚಿವರೊಂದಿಗೆ ಚರ್ಚೆ:
ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತ್ಯೇಕವಾಗಿ ಎಲ್ಲ ಸಚಿವರ ಬಳಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದರು ಎನ್ನಲಾಗಿದೆ. ಒಟ್ಟಾರೆ ಎಲ್ಲ ಸಚಿವರ ಅಭಿಪ್ರಾಯ, ಹಿಂದಿನ ಬಿಜೆಪಿ ಸರಕಾರದ ಅಡ್ವೊಕೇಟ್ ಜನರಲ್ ವ್ಯಕ್ತಪಡಿಸಿದ್ದ ಅಭಿಪ್ರಾಯ ಆಧರಿಸಿ ಹಾಗೂ ಹಾಲಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರಿಂದಲೂ ಅಭಿಪ್ರಾಯ ಪಡೆದು ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣ ಹಿಂಪಡೆಯಲು ಸಂಪುಟ ನಿರ್ಧರಿಸಿತು. ಈ ಸಂಪುಟ ಸಭೆಗೆ ಡಿ.ಕೆ.ಶಿವಕುಮಾರ್ ಗೈರು ಹಾಜರಾಗಿದ್ದರು.
ಡಿಕೆಶಿ ಮೇಲಿದ್ದ ಆರೋಪಗಳೇನು?: 2017ರಲ್ಲಿ ಡಿ.ಕೆ.ಶಿವಕುಮಾರ್ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಅಧಿಕಾರಿಗಳು ಸುಮಾರು 8.59 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದ್ದರು. ಇದೇ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಈ.ಡಿ. ಅಧಿಕಾರಿಗಳೂ ದಾಳಿ ಮಾಡಿ, ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿದ್ದರು.
ಈ.ಡಿ. ತನಿಖೆಯನ್ನು ಆಧರಿಸಿ ಡಿ.ಕೆ.ಶಿವಕುಮಾರ್ ವಿರುದ್ಧ ಎಫ್‍ಐಆರ್ ದಾಖಲಿಸಲು ಸಿಬಿಐ ಅಂದಿನ ರಾಜ್ಯ ಸರಕಾರದಿಂದ ಅನುಮತಿ ಕೋರಿತ್ತು. ಆದರೆ, ಅಡ್ವೊಕೇಟ್ ಜನರಲ್ ಆಗಿದ್ದ ಪ್ರಭುಲಿಂಗ ನಾವಡಗಿ, ಇದು ಸಿಬಿಐಗೆ ನೀಡುವ ಪ್ರಕರಣವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೂ, ಅಂದು ಮುಖ್ಯಮಂತ್ರಿ ಆಗಿದ್ದ ಬಿ.ಎಸ್.ಯಡಿಯೂರಪ್ಪ 2019ರ ಸೆ.25ರಂದು ಸಿಬಿಐ ತನಿಖೆಗೆ ಅನುಮತಿ ನೀಡಿದರು. 2020ರ ಅ.3ರಂದು ಸಿಬಿಐ ಶಿವಕುಮಾರ್ ವಿರುದ್ಧ ಎಫ್‍ಐಆರ್ ದಾಖಲಿಸಿ ತನಿಖೆ ನಡೆಸುತ್ತಿದೆ.