ಎಸ್‍ಸಿ-ಎಸ್‍ಟಿ ವಸತಿಗೃಹಗಳಲ್ಲಿ ಸಿಬ್ಬಂದಿ ಕೊರತೆ: ಸ್ವಯಂ ಪ್ರೇರಿತ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡ ಹೈಕೋರ್ಟ್

Update: 2023-12-16 18:18 GMT

ಬೆಂಗಳೂರು: ರಾಜ್ಯ ಸರಕಾರ ನಡೆಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ವಿದ್ಯಾರ್ಥಿ ವಸತಿಗೃಹಗಳಲ್ಲಿ ಸಿಬ್ಬಂದಿ ಕೊರತೆಗೆ ಸಂಬಂಧಿಸಿದಂತೆ ರಾಜ್ಯ ಸಮಾಜ ಕಲ್ಯಾಣ ಇಲಾಖೆಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಮಾಧ್ಯಮಗಳ ವರದಿ ಆಧರಿಸಿ ಹೈಕೋರ್ಟ್ ಸ್ವಯಂಪ್ರೇರಿತ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿಕೊಂಡಿದೆ.

ಬೆಳಗಾವಿಯ ‘ತರುಣ ಭಾರತ್’ ಮರಾಠಿ ದಿನಪತ್ರಿಕೆಯಲ್ಲಿ ಡಿ.7ರಂದು ಪ್ರಕಟವಾದ ವರದಿ ಆಧರಿಸಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಪಿಐಎಲ್ ಅನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು ವಿಚಾರಣೆ ನಡೆಸಿತು.

ಇದೇ ವೇಳೆ ನ್ಯಾಯಪೀಠವು, ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಅಗತ್ಯ ನೆರವು ಹಾಗೂ ಸಲಹೆ ನೀಡಲು ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ನಿತಿನ್ ರಮೇಶ್ ಅವರನ್ನು ಅಮಿಕಸ್ ಕ್ಯೂರಿ ಆಗಿ ನೇಮಕ ಮಾಡಿದೆ. ಪ್ರಕರಣದ ಕುರಿತಂತೆ ಅರ್ಜಿಯ ಪ್ರತಿ ಹಾಗೂ ಎಲ್ಲ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ರಿಜಿಸ್ಟ್ರಾರ್ ಅವರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

‘ರಾಜ್ಯದಲ್ಲಿ 1,297 ಮೆಟ್ರಿಕ್ ಪೂರ್ವ ವಸತಿಗೃಹಗಳಿವೆ. 1,165 ಮೆಟ್ರಿಕ್ ನಂತರದ ವಸತಿಗೃಹಗಳಿವೆ. ಆದರೆ, ವಾರ್ಡನ್ ಮತ್ತು ಅಧೀಕ್ಷಕರು 1,200ಕ್ಕಿಂತ ಕಡಿಮೆ ಇದ್ದಾರೆ. ಕಾಲಕಾಲಕ್ಕೆ ಸಿಬ್ಬಂದಿ ನೇಮಕಾತಿ ನಡೆಯುತ್ತಿಲ್ಲ’ ಎಂದು ವಿವರಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News