ಬೆಂಗಳೂರು: ನಾಮಫಲಕಗಳಲ್ಲಿ ಕನ್ನಡಕ್ಕೆ ಆಗ್ರಹಿಸಿ ಕರವೇ ವತಿಯಿಂದ ಪ್ರತಿಭಟನೆ
ಬೆಂಗಳೂರು, ಡಿ.27: ಕರ್ನಾಟಕ ರಕ್ಷಣಾ ವೇದಿಕೆ ಬುಧವಾರ ನಡೆಸಿದ ಜಾಗೃತಿ ಮೆರವಣಿಗೆ ಪ್ರತಿಭಟನೆ ಸ್ವರೂಪ ಪಡೆದುಕೊಂಡಿದ್ದು, ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬುಧವಾರ ಕರವೇ ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ವಿಮಾನ ನಿಲ್ದಾಣ ರಸ್ತೆಯ ಸಾದಹಳ್ಳಿ ಟೋಲ್ ಗೇಟ್‌ನಿಂದ ಆರಂಭವಾದ ಬಹೃತ್ ಪ್ರತಿಭಟನಾ ಮೆರವಣಿಗೆಯಲ್ಲಿ ಕಾರ್ಯಕರ್ತರು ಅನ್ಯಭಾಷೆಯ ನಾಮಫಲಕ ತೆರವುಗೊಳಿಸುವಂತೆ ಘೋಷಣೆ ಕೂಗಿದರು.
ಬೆಂಗಳೂರಿನ ವಾಣಿಜ್ಯ ಮಳಿಗೆಗಳಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕ ಇರಲೇಬೇಕು ಎಂದು ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಬರೀ ಇಂಗ್ಲಿಷ್ ಹಾಗೂ ಹಿಂದಿ ನಾಮಫಲಕಗಳಿದ್ದ ಹೋಟೆಲ್, ವಾಣಿಜ್ಯ ಕಟ್ಟಡಗಳ ಬ್ಯಾನರ್, ಪೋಸ್ಟರ್ ಗಳನ್ನು ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡರು.
ಮೆರವಣಿಗೆಯನ್ನುದ್ದೇಶಿಸಿ ಮಾತನಾಡಿದ ಟಿ.ಎ.ನಾರಾಯಣಗೌಡ,ರಾಜಧಾನಿ ಬೆಂಗಳೂರು ಕನ್ನಡಿಗರ ಕೈತಪ್ಪಿ ಹೋಗುವ ಸ್ಥಿತಿಯಲ್ಲಿದೆ. ಬೇರೆ ರಾಜ್ಯಗಳಿಂದ ಬಂದ ಹಿಂದಿ ಭಾಷಿಕರು ಕನ್ನಡ ಬಳಸದೆ ಧಿಮಾಕು ಪ್ರದರ್ಶನ ಮಾಡುತ್ತಿದ್ದಾರೆ. ಅದಕ್ಕಾಗಿ ಅವರಿಗೆ ಎಚ್ಚರಿಕೆ ನೀಡುವುದಕ್ಕಾಗಿ ಈ ಮೆರವಣಿಗೆ ಎಂದು ಹೇಳಿದರು.
ನಾನು ನಮ್ಮ ಕಾರ್ಯಕರ್ತರಿಗೆ ಒಂದು ಸಂದೇಶ ಕೊಡುತ್ತಿದ್ದೇನೆ. ನಾನು ಬಂಧನಕ್ಕೆ ಒಳಗಾದರೂ ನೀವು ಯಾರು ಹೋರಾಟದಿಂದ ಹಿಂದೆ ಸರಿಯಬೇಡಿ. ಪೊಲೀಸ್ ಇಲಾಖೆ ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಕರವೇ ಕಾರ್ಯಕರ್ತರು ಇಡೀ ಬೆಂಗಳೂರಿಗೆ ಏನು ಮಾಡುತ್ತಾರೋ ಎಂಬ ಭಯ ಸರ್ಕಾರ ಹಾಗೂ ಪೊಲೀಸರಿಗೆ ಕಾಡುತ್ತಿದೆ. ಪೊಲೀಸರು ಮತ್ತು ಜನರು ಜಾಗೃತಿ ರ‍್ಯಾಲಿ ಮಾಡಲು ಅವಕಾಶ ಕೊಟ್ಟರೆ ಬೆಂಗಳೂರು ಸುರಕ್ಷಿತವಾಗಿ ಇರುತ್ತದೆ. ನಮ್ಮನ್ನು ಕೆಣಕುವುದು, ಕೆರಳಿಸುವುದು ಮಾಡಿದರೆ ಹೋರಾಟದ ರೂಪ ಬದಲಾಗುತ್ತದೆ ಎಂದರು.
ಯುಬಿ ಸಿಟಿ ಮಾಲ್ ಗೆ ನುಗ್ಗಿದ ಕರವೇ ಕಾರ್ಯಕರ್ತರು ಇಂಗ್ಲಿಷ್ ಬರಹಗಳಿಗೆ ಮಸಿ ಬಳಿದು ಆಕ್ರೋಶ ಹೊರಹಾಕಿದರು. ಮೆರವಣಿಯಲ್ಲಿ ಕೆಲವು ಕಡೆ ಲೈಟಿಂಗ್ ಬೋರ್ಡ್ ಕೂಡ ಒಡೆದು ಹಾಕಿ, ಹತ್ತಾರು ಅಡಿಯ ನಾಮಫಲಕ ಬೋರ್ಡ್ ಗಳನ್ನು, ಫಲಕಗಳನ್ನು ಕೀಳಲು ಯತ್ನಿಸಿದರು.