ಕೆಇಎ ಪರೀಕ್ಷಾ ಅಕ್ರಮ ಪ್ರಕರಣ: 12 ಮಂದಿ ವಿರುದ್ಧ ಕೊಕಾ ಕಾಯ್ದೆ ಜಾರಿ

Update: 2023-12-20 17:15 GMT

ಬೆಂಗಳೂರು: ರಾಜ್ಯಾದ್ಯಂತ ಸಂಚಲನ ಸೃಷ್ಠಿಸಿದ್ದ ಕೆಇಎ ಪರೀಕ್ಷಾ ಅಕ್ರಮ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ಸೇರಿದಂತೆ 12 ಆರೋಪಿಗಳ ವಿರುದ್ಧ ‘ಕೊಕಾ ಕಾಯ್ದೆ’ಯನ್ನು ಜಾರಿ ಮಾಡಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್, ಸಂತೋಷ್ ಕೊಟ್ಟಳ್ಳಿ, ಶಿವಕುಮಾರ್, ಸಿದ್ರಾಮ ಕೋಳಿ, ರವಿಕುಮಾರ್, ರುದ್ರಗೌಡ, ರಹೀಂ ಚೌಧರಿ, ಸಾಗರ್, ಬಸಣ್ಣ ಪೂಜಾರಿ, ಚಂದ್ರಕಾಂತ ಬುರಕಲ್, ಶಶಿಧರ ಜಮಾದಾರ, ಬಸವರಾಜ ಎಳವಾರ ಎಂಬುವವರ ವಿರುದ್ಧ ಕೊಕಾ ಕಾಯ್ದೆ (ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ) ಜಾರಿಗೊಳಿಸಲಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(ಕೆಇಎ) ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ ಮತ್ತು ಇತರೇ ರಾಜ್ಯ ಸರಕಾರದ ಸಂಸ್ಥೆಗಳಲ್ಲಿ ಖಾಲಿ ಇದ್ದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2023ರ ಅಕ್ಟೋಬರ್ 28ರಂದು ನಡೆಸಿದ್ದ ಪರೀಕ್ಷೆಯಲ್ಲಿ ಅವ್ಯವಹಾರದ ಆರೋಪ ಕೇಳಿಬಂದ ಹಿನ್ನೆಲೆ, ಆರೋಪಿ ಆರ್.ಡಿ.ಪಾಟೀಲ್ ಮತ್ತು ಇತರರ ವಿರುದ್ಧ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಒಟ್ಟು 8 ಪ್ರಕರಣಗಳು ದಾಖಲಾಗಿತ್ತು.

ಈ ಪ್ರಕರಣದಲ್ಲಿ ಸಿಐಡಿಯು ತನಿಖೆಯನ್ನು ಕೈಗೊಂಡು ಹಲವು ಆರೋಪಿಗಳನ್ನು ಬಂಧಿಸಿ, ಪ್ರಮುಖ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿರುವುದಾಗಿ ಗೊತ್ತಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ಎಂಬಾತ ಈ ಹಿಂದೆ ನಡೆದ ಪಿಎಸ್ಸೈ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿಯೂ ಅಕ್ರಮ ಎಸಗಿದ್ದರಿಂದ ಈತ ಮತ್ತು ಈತನ ಸಹಚರರ ವಿರುದ್ಧ ಕಲಬುರ್ಗಿ ನಗರ, ಅಶೋಕನಗರ ಪೊಲೀಸ್ ಠಾಣೆ ಪ್ರಕರಣದಲ್ಲಿ ಕೊಕಾ ಕಾಯ್ದೆಯನ್ನು ಒಳಪಡಿಸಿ ಮತ್ತಷ್ಟು ತನಿಖೆಯನ್ನು ಮುಂದುವರಿಸಿರುವುದಾಗಿ ಸಿಐಡಿ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News