ಕೆಇಎ : ಶುಲ್ಕ ಮರುಪಾವತಿಗೆ ಎ.10ರೊಳಗೆ ಬ್ಯಾಂಕ್ ಖಾತೆ ವಿವರ ಸಲ್ಲಿಸಲು ಸೂಚನೆ
ಬೆಂಗಳೂರು : ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‍ಗಳ ಪ್ರವೇಶ ಸಂದರ್ಭದಲ್ಲಿ ಸಂದಾಯ ಮಾಡಿದ್ದ ಕಾಷನ್ ಡೆಪಾಸಿಟ್/ ಹೆಚ್ಚುವರಿ ಶುಲ್ಕವನ್ನು ವಾಪಸ್ ಪಡೆಯದ ಅಭ್ಯರ್ಥಿಗಳು ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಇದೇ ಎ.10ರೊಳಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‍ಸೈಟ್ ಮೂಲಕ ಸಲ್ಲಿಸಲು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಸೂಚಿಸಿದ್ದಾರೆ.
ಸೋಮವಾರ ಪ್ರಕಟನೆ ಹೊರಡಿಸಿರುವ ಅವರು, ವಿವಿಧ ಕೋರ್ಸ್‍ಗಳಿಗೆ ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಮೊತ್ತವನ್ನು ಜಮಾ ಮಾಡಿರುವ ಹಾಗೂ ವಿವಿಧ ಹಂತಗಳಲ್ಲಿ ಸೀಟುಗಳನ್ನು ರದ್ದುಪಡಿಸಿಕೊಂಡವರು ನಿಯಮ ಪ್ರಕಾರ ಶುಲ್ಕ ಮರುಪಾವತಿ ಪಡೆಯಲು ಅರ್ಹರಿರುತ್ತಾರೆ. ಬ್ಯಾಂಕ್ ಖಾತೆ ವಿವರ ಸರಿ ಇದ್ದವರ ಖಾತೆಗಳಿಗೆ ನೇರವಾಗಿ ಹಣ ವರ್ಗವಾಗಿದ್ದು ಇನ್ನೂ ಸುಮಾರು 1500 ಮಂದಿಯ ಬ್ಯಾಂಕ್ ಖಾತೆ ವಿವರಗಳು ಸರಿ ಇಲ್ಲದ ಕಾರಣ ಹಣ ಸಂದಾಯ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ಬ್ಯಾಂಕ್ ಖಾತೆಗಳ ವಿವರಗಳನ್ನು ಸರಿಯಾಗಿ ನಮೂದಿಸದೆ ಇರುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಾಧಿಕಾರದ ವೆಬ್‍ಸೈಟ್‍ನಲ್ಲಿ ಈಗಾಗಲೇ ಪ್ರಕಟಿಸಲಾಗಿದೆ. ಇದರ ನಡವೆಯೂ ಇನ್ನೂ ಅನೇಕರು ತಮ್ಮ ಬ್ಯಾಂಕ್ ಖಾತೆಗಳ ವಿವರ ನೀಡಿಲ್ಲ. ಅಂತಹ ಅಭ್ಯರ್ಥಿಗಳು ತಮ್ಮ ಯೂಸರ್ ಐಡಿ ಮತ್ತು ಪಾಸ್‍ವರ್ಡ್ ದಾಖಲಿಸಿ ತಮ್ಮ ಬ್ಯಾಂಕ್ ಖಾತೆಗಳ ವಿವರಗಳನ್ನು ಇದೇ ಎ.10ರೊಳಗೆ ಆನ್‍ಲೈನ್ ಮೂಲಕ ಅಪ್ಲೋ ಡ್ ಮಾಡಲು ಸೂಚಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರವೇಶ ಪಡೆದ ಅಭ್ಯರ್ಥಿಗಳೂ ತಮ್ಮ ಹೆಚ್ಚುವರಿ ಶುಲ್ಕವನ್ನು ವಾಪಸ್ ಪಡೆಯಬಹುದು. ಎಂಜಿನಿಯರಿಂಗ್ ಕೋರ್ಸ್‍ಗೆ ಸಂಬಂಧಿಸಿ 2022ನೆ ಸಾಲಿನ 579 ಮಂದಿ ಹಾಗೂ 2023ನೆ ಸಾಲಿನ 857 ಮಂದಿಗೆ ಹಣ ನೀಡುವುದು ಬಾಕಿ ಇದೆ. ಇವರಿಗೆ 750 ರೂಪಾಯಿಯಿಂದ 96 ಸಾವಿರ ರೂ.ವರೆಗೆ ಬಾಕಿ ಮೊತ್ತ ನೀಡಬೇಕಾಗಿದೆ. ವೈದ್ಯಕೀಯ ಪದವಿ ಕೋರ್ಸ್‍ಗೆ ಸಂಬಂಧಿಸಿ 2023ನೆ ಸಾಲಿಗೆ 300 ವಿದ್ಯಾರ್ಥಿಗಳಿಗೆ ಒಟ್ಟು 3.75 ಕೋಟಿ ರೂ. ಪಾವತಿ ಮಾಡಬೇಕಾಗಿದೆ. ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‍ನ 24 ಮಂದಿಗೆ 59.54 ಲಕ್ಷ ರೂ. ಕೊಡಬೇಕಾಗಿದೆ ಎಂದು ವಿವರಿಸಿದ್ದಾರೆ.