ಕೋಲಾರ | ಕೋಚಿಮುಲ್ ನ 75 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ: ಈ.ಡಿ
ಕೋಲಾರ,ಜ.12 : ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅಧ್ಯಕ್ಷರಾಗಿರುವ ಕೋಲಾರ ಚಿಕ್ಕಬಳ್ಳಾಪುರ ಹಾಲು ಸಹಕಾರ ಒಕ್ಕೂಟದಲ್ಲಿ ಇತ್ತೀಚೆಗೆ ನಡೆದ 75 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ.) ಗುರುವಾರ ಸಂಜೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಜನವರಿ 8 ಮತ್ತು 9ರಂದು ಸುಮಾರು 40 ಗಂಟೆಗಳ ಕಾಲ ಕೆ.ವೈ.ನಂಜೇಗೌಡ ಮನೆ ಸೇರಿದಂತೆ 14 ಕಡೆ ಶೋಧ ನಡೆಸಿದ ಈ.ಡಿ.ಅಧಿಕಾರಿಗಳು ದಾಖಲೆ ಪರಿಶೀಲನೆ ಮುಕ್ತಾಯಗೊಂಡ ನಂತರ ಪ್ರಕಟಣೆ ಹೊರಡಿಸಿದೆ. ಕೋಚಿಮುಲ್ ನ 75 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ವಿಚಾರ ಪತ್ತೆಯಾಗಿದೆ ಎಂದು ಬಹಿರಂಗಗೊಳಿಸಿರುವ ಅಧಿಕಾರಿಗಳು, ಪ್ರತಿ ಹುದ್ದೆಯೂ 20 ಲಕ್ಷದಿಂದ 30 ಲಕ್ಷಕ್ಕೆ ಮಾರಾಟವಾಗಿರುವುದು ಕಂಡುಬಂದಿದೆ. ಇದನ್ನು ಕೋಚಿಮುಲ್ ನಿರ್ದೇಶಕರು ಮತ್ತು ನೇಮಕಾತಿ ಸಮಿತಿಯ ಸದಸ್ಯರು ಒಪ್ಪಿಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋಚಿಮುಲ್ ಆಡಳಿತ ಮಂಡಳಿ ತೀರ್ಮಾನದಂತೆ ಅಂತಿಮ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವ ಮುನ್ನವೇ ಆಯ್ಕೆಯಾಗದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿ ತರಬೇತಿಗೆ ಕಳುಹಿಸಲಾಗಿದೆ. ಕೆಲ ರಾಜಕಾರಣಿಗಳು ಅಭ್ಯರ್ಥಿಗಳ ಆಯ್ಕೆಗೆ ಶಿಫಾರಸು ಮಾಡಿದ್ದು, 30 ಪ್ರಕರಣ ತಾಳೆಯಾಗಿದೆ. ಅಧ್ಯಕ್ಷ ಕೆ.ವೈ.ನಂಜೇಗೌಡ ಭಾಗಿ ಆಗಿದ್ದು, ಸಂದರ್ಶನದ ಅಂಕ ಬದಲಾವಣೆ ಮಾಡಿರುವುದು ಪತ್ತೆ ಮಾಡಿರುವುದಾಗಿ ಹೇಳಿದ್ದಾರೆ.
ಮಾಲೂರು ದರಖಾಸ್ತು ಸಮಿತಿ ಅಧ್ಯಕ್ಷರಾಗಿದ್ದ ನಂಜೇಗೌಡ, ಸದಸ್ಯರು ಹಾಗೂ ಕಂದಾಯ ಅಧಿಕಾರಿಗಳು ಕೇವಲ ಒಂದು ತಿಂಗಳಲ್ಲಿ ಸಭೆ ನಡೆಸಿ, ಮಾಲೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಸುಮಾರು 150 ಕೋಟಿ ಮೌಲ್ಯದ 80 ಎಕರೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಿದ ಪ್ರಕರಣಕ್ಕೆ ಸಂಬoಧಿಸಿದoತೆ ಶೋಧ ನಡೆಸಲಾಗಿದೆ. ಸರ್ಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಠಿಸಿದ್ದಾರೆ. ಅದನ್ನು ನಕಲಿ ಫಲಾನುಭವಿಗಳಿಗೆ ಮಂಜೂರು ಮಾಡಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಪ್ರಾದೇಶಿಕ ಆಯುಕ್ತರ ಪರಿಶೀಲನಾ ವರದಿ ಆಧಾರದ ಮೇಲೆ ಆ ಮಂಜೂರಾತಿ ರದ್ದಾಗಿದೆ. ಮಾರ್ಗಸೂಚಿಯನ್ನು ಉಲ್ಲಂಘಿಸಿ ದಾಖಲೆಗಳನ್ನು ತಿರುಚಿ ಅಕ್ರಮವಾಗಿ ಜಮೀನು ಮಂಜೂರು ಮಾಡಿರುವುದು ಶೋಧ ನಡೆಸಿದ ವೇಳೆ ಪತ್ತೆಯಾಗಿದ್ದು, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ 2002ರಡಿ(ಪಿಎಂ.ಎಲ್.ಎ) ನಂಜೇಗೌಡ ಹಾಗೂ ಅವರ ಸಮೀಪವರ್ತಿಗಳ ನಿವಾಸಗಳಲ್ಲಿ ಶೋಧ ಕೈಗೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಮಾಲೂರು ಠಾಣೆಯಲ್ಲಿ ನಂಜೇಗೌಡ ಹಾಗೂ ಇತರರ ಮೇಲೆ ದಾಖಲಾಗಿರುವ ಎಫ್ಐಆರ್ ಆಧರಿಸಿ ಈ ತನಿಖೆ ನಡೆಸಲಾಗುತ್ತಿದೆ. ನಂಜೇಗೌಡ ಭೂ ಮಂಜೂರಾತಿ ಸಮಿತಿ ಅಧ್ಯಕ್ಷರಾಗಿದ್ದರೆ, ಅಂದಿನ ಮಾಲೂರು ತಹಶೀಲ್ದಾರ್ ವಿ.ನಾಗರಾಜ್ ಹಾಗೂ ಇತರ ಆರೋಪಿಗಳು ಸದಸ್ಯರಾಗಿದ್ದರು. ಎಂದು ಪ್ರಕಟಣೆಯಲ್ಲಿಹೇಳಲಾಗಿದೆ.
ನಂಜೇಗೌಡರಿಗೆ ಸಂಬoಧಿಸಿದ 14 ಕಟ್ಟಡಗಳಲ್ಲಿ ದಾಳಿ ನಡೆಸಿದ್ದು, 25 ಲಕ್ಷ ನಗದು, 50 ಕೋಟಿ ಮೌಲ್ಯದ ಆಸ್ತಿ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.