ಕೊಪ್ಪ | ಅನೈತಿಕ ಪೊಲೀಸ್ ಗಿರಿಯಿಂದ ನೊಂದು ಯುವತಿ ಆತ್ಮಹತ್ಯೆಗೆ ಯತ್ನ: ಸಂಘಪರಿವಾರದ ಕಾರ್ಯಕರ್ತ ಸೇರಿ ಇಬ್ಬರ ವಿರುದ್ಧ ಪ್ರಕರಣ ದಾಖಲು

Update: 2023-09-09 19:19 GMT

ಚಿಕ್ಕಮಗಳೂರು, ಸೆ.8: ಅನೈತಿಕ ಪೊಲೀಸ್ ಗಿರಿಯಿಂದ ಮಾನಸಿಕವಾಗಿ ನೊಂದು ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆದಿರುವು ತಡವಾಗಿ ಬೆಳಕಿಗೆ ಬಂದಿದ್ದು, ಆತ್ಮಹತ್ಯೆಗೆ ಯತ್ನಿಸಿದ ಯುವತಿ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಸುಮಾರು 20 ದಿನಗಳ ಹಿಂದೆ ಕೊಪ್ಪ ಪಟ್ಟಣದ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಯುವತಿಯೊಬ್ಬಳು ಇನ್ನೊಂದು ಕೋಮಿನ ಯುವಕರೊಂದಿಗೆ ಕಾರಿನಲ್ಲಿ ಪ್ರವಾಸಕ್ಕೆ ಹೋಗಿದ್ದಾಳೆಂದು ಆರೋಪಿಸಿ ಸಂಘಪರಿವಾರದ ಯುವಕರು ಕಾರು ಅಡ್ಡಗಟ್ಟಿ ಬೆದರಿಕೆ ಹಾಕಿದ್ದ ಘಟನೆ ನಡೆದಿದ್ದು, ಈ ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿರಲಿಲ್ಲ. ಆದರೆ ಕಳೆದ ಮೂರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕಾರು ಅಡ್ಡಗಟ್ಟಿದ ಸಂದರ್ಭದಲ್ಲಿ ತೆಗೆದ ಯುವತಿಯ ಫೋಟೊಗಳನ್ನು ಕಿಡಿಗೇಡಿಗಳು ವೈರಲ್ ಮಾಡಿದ್ದರು ಎನ್ನಲಾಗಿದೆ.

ಈ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಫೋಟೊಗಳಿಗೆ ಸಂಬಂಧಿಸಿದಂದತೆ ಜಿಲ್ಲಾ ಪೊಲೀಸ್ ಇಲಾಖೆ ಕಳೆದ ಎರಡು ದಿನಗಳ ಹಿಂದೆ ಸ್ಪಷ್ಟನೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಫೋಟೊ ಭಾರೀ ಹಿಂದೆ ನಡೆದ ಘಟನೆಗಳಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ ಎಂದು ಸ್ಪಷ್ಟನೆ ನೀಡಲಾಗಿತ್ತು.

ಆದರೆ, ಯುವತಿಯ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರಿಂದ ಯುವತಿಯ ಕಾಲೇಜು ಸ್ನೇಹಿತರು ಈ ಬಗ್ಗೆ ಆಕೆಯನ್ನು ಪ್ರಶ್ನಿಸಲಾರಂಭಿಸಿದ್ದರು ಎನ್ನಲಾಗುತ್ತಿದ್ದು, ಇದರಿಂದ ಮನನೊಂದ ಯುವತಿ ಶುಕ್ರವಾರ ಸಂಜೆ ಕೊಪ್ಪ ಪಟ್ಟಣದ ಕಾಲೇಜು ಆವರಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಅಸ್ಪಸ್ಥಳಾದ ಯುವತಿಯನ್ನು ಪಟ್ಟಣದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಯುವತಿ ಸ್ಥಿತಿ ಚಿಂತಾಜನಕವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಯುವತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಳಿಕ ಯುವತಿಯ ಫೋಟೊ ವೈರಲ್ ಮಾಡಿದ್ದ ಸಂಘಪರಿವಾರ ಓರ್ವ ಯುವಕ ಸೇರಿದಂತೆ ಇಬ್ಬರು ಕಿಡಿಗೇಡಿಗಳ ಮೇಲೆ ಕೊಪ್ಪ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಆರೋಪಿಗಳು ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News