ಕೃಷಿ ಇಲಾಖೆಯ 945 ಗ್ರೂಪ್ ಬಿ ಹುದ್ದೆ ಭರ್ತಿಗೆ ಕೆಪಿಎಸ್‍ಸಿಯಿಂದ ಅಧಿಸೂಚನೆ

Update: 2024-09-20 13:40 GMT

ಬೆಂಗಳೂರು : ಕೃಷಿ ಇಲಾಖೆಯಲ್ಲಿ ಒಟ್ಟಾರೆ 945 ಕೃಷಿ ಅಧಿಕಾರಿಗಳು ಹಾಗೂ ಸಹಾಯಕ ಕೃಷಿ ಅಧಿಕಾರಿಗಳನ್ನೊಳಗೊಂಡ ಗ್ರೂಪ್ ಬಿ ಹುದ್ದೆಗಳ ಭರ್ತಿಗೆ ಲೋಕಸೇವಾ ಆಯೋಗ ಅಧಿಸೂಚನೆ ಹೊರಡಿಸಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಇಲಾಖೆ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿರುವುದು ಇದೇ ಮೊದಲು. ಇಲಾಖೆಯಲ್ಲಿ ಶೇ.60ಕ್ಕೂ ಅಧಿಕ ಹುದ್ದೆ ಗಳು ಖಾಲಿ ಇರುವುದನ್ನು ಮನಗಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನವೊಲಿಸಿ ಆರ್ಥಿಕ ಇಲಾಖೆ ಅನುಮತಿಯನ್ನು ಪಡೆದು ನೇಮಕಾತಿಗಾಗಿ ಕೆಪಿಎಸ್‍ಸಿಗೆ ಪ್ರಸ್ತಾವನೆ ಕಳುಹಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ಈ ನೇಮಕಾತಿಯಿಂದ ರಾಜ್ಯದ 31 ಜಿಲ್ಲೆಗಳ ಎಲ್ಲ ತಾಲೂಕುಗಳಲ್ಲಿ ತಳ ಮಟ್ಟದಲ್ಲಿ ಕೆಲಸ ಮಾಡಲು ಅಧಿಕಾರಿಗಳನ್ನು ನೇಮಿಸಲು ಸಾಧ್ಯವಾಗಲಿದೆ. 2008 ರಲ್ಲಿ ಕೆಪಿಎಸ್‍ಸಿ ಮೂಲಕ 410 ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ಇದೀಗ ಒಂದೇ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿಗಳ ನೇಮಕಾತಿ ಮಾಡಲು ಕ್ರಮ ವಹಿಸಲಾಗಿದ್ದು ಮೂರು ತಿಂಗಳೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣ ಗೊಳಿಸಲು ಸೂಚಿಸಲಾಗಿದೆ ಎಂದು ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಇದರಿಂದ ಎಲ್ಲ ರೈತ ಸಂಪರ್ಕ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಅಧಿಕಾರಿಗಳು ಲಭ್ಯವಾಗಲಿದ್ದು ಕೃಷಿಕ ಸಮುದಾಯದ ಮಾರ್ಗದರ್ಶನ ಹಾಗೂ ಸೇವೆಗೆ ದೊಡ್ಡ ಶಕ್ತಿ ದೊರೆತಂತಾಗಲಿದೆ. ಈ ನೇಮಕಾತಿಯಿಂದ ಇಲಾಖೆಯಲ್ಲಿ ಖಾಲಿ ಇದ್ದ ಮೂರನೇ ಒಂದರಷ್ಟು ಅಧಿಕಾರಿಗಳ ಹುದ್ದೆ ಭರ್ತಿಯಾದಂತಾಗಲಿದೆ. ಇದರಿಂದ ರೈತರಿಗೆ ಸೇವಾ ಸೌಲಭ್ಯ ಒದಗಿಸುವ ಪ್ರಕ್ರಿಯೆ ಸುಗಮವಾಗಲಿದೆ. ಬಾಕಿ ಉಳಿಯುವ ಖಾಲಿ ಹುದ್ದೆಗಳ ಭರ್ತಿಗೂ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News