ರೈತರಿಗೆ ಶೀಘ್ರ ಬರ ಪರಿಹಾರ ತಲುಪಿಸಲು ಅಧಿಕಾರಿಗಳಿಗೆ ಕೃಷ್ಣ ಬೈರೇಗೌಡ ಸೂಚನೆ

Update: 2024-01-19 15:38 GMT

ಬೆಂಗಳೂರು: ಬರ ಪರಿಹಾರದ ಮೊದಲ ಕಂತಿನ ಹಣವನ್ನು ಶೀಘ್ರವೇ ರೈತರಿಗೆ ತಲುಪಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಶುಕ್ರವಾರ ವಿಕಾಸಸೌಧದಲ್ಲಿ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳ ಜೊತೆ ಮಾಸಿಕ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಫ್ರೂಟ್ಸ್‌ ನಲ್ಲಿ  ಶೇ.75ರಷ್ಟು ರೈತರ ಸಂಪೂರ್ಣ ಜಮೀನಿನ ಮಾಹಿತಿಯನ್ನು ನವೀಕರಿಸಿದ್ದು ಮುಂದಿನ ಒಂದು ವಾರದಲ್ಲಿ 30 ಲಕ್ಷ ರೈತರಿಗೆ ಮೊದಲ ಕಂತಿನ ಬರ ಪರಿಹಾರದ ಹಣ ಬ್ಯಾಂಕ್ ಖಾತೆಗೆ ತಲುಪಲಿದೆ ಎಂದರು.

ರೈತರಿಗೆ ಬರ ಹಾಗೂ ಮಳೆಹಾನಿ ಪರಿಹಾರ ತಲುಪಿಸುವ ವಿಚಾರದಲ್ಲೂ ಈ ಹಿಂದೆ ಭಾರಿ ಅವ್ಯವಹಾರಗಳು ನಡೆದಿವೆ. ಜಮೀನು ಯಾರದ್ದೊ ಇದೆ, ಪರಿಹಾರ ಇನ್ಯಾರಿಗೋ ಹೋಗಿರುವ ಹಲವು ಪ್ರಕರಣಗಳು ನನ್ನ ಗಮನಕ್ಕೆ ಬಂದಿದೆ. ಕಡೂರು ಒಂದೇ ತಾಲೂಕಿನಲ್ಲಿ 6 ಕೋಟಿ ರೂ. ಪರಿಹಾರದ ಹಣ ಅಕ್ರಮ ಎಸಲಾಗಿದೆ. ಹಣ ದುರ್ಬಳಕೆಯಾದವರ ಪಟ್ಟಿ ನನ್ನ ಬಳಿ ಇದೆ. ಹಾನಗಲ್, ಶಿಗ್ಗಾಂವ್ ನಲ್ಲೂ ಇಂತಹ ಪ್ರಕರಣಗಳು ಕಂಡುಬಂದಿದೆ ಎಂದು ಅವರು ಮಾಹಿತಿ ನೀಡಿದರು.

ಗರಿಷ್ಠ 5 ಎಕರೆ ವರೆಗೆ ಪರಿಹಾರ ಕೊಡಬಹುದು. ಆದರೆ, 5 ಎಕರೆ ಮೀರಿ ಪರಿಹಾರ ವಿತರಿಸಿದ್ದಾರೆ. ರೈತರಲ್ಲದವರ ಖಾತೆಗೆ 49,999 ರೂ. ಜಮೆ ಆಗಿದೆ. ಅಸಲಿ ರೈತರ ಖಾತೆಗೆ ಅಲ್ಪ ಪ್ರಮಾಣದ ಮೊತ್ತ ಮಾತ್ರ ಜಮೆ ಆಗಿದೆ. ಇದೇ ಕಾರಣಕ್ಕೆ ಈ ಬಾರಿ ರೈತರಿಗೆ ಬರ ಪರಿಹಾರ ನೀಡಲು ‘ಫ್ರೂಟ್ಸ್’ ದಾಖಲಾತಿ ಕಡ್ಡಾಯಗೊಳಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಈ ಹಿಂದೆ ಫ್ರೂಟ್ಸ್ ಡಾಟಾಬೇಸ್‍ನಲ್ಲಿ 7.7 ಲಕ್ಷ ರೈತರ ಮಾಹಿತಿಯೆ ಇರಲಿಲ್ಲ. ಇದೀಗ ಹೊಸದಾಗಿ ಸೇರಿಸಲಾಗಿದೆ. 34 ಲಕ್ಷ ರೈತರ ಜಮೀನ ಮಾಹಿತಿಯನ್ನು ಈ ತಂತ್ರಾಂಶದಲ್ಲಿ ದಾಖಲು ಮಾಡಲಾಗಿದೆ. ಬಿಟ್ಟು ಹೋಗಿರುವ ಅರ್ಹ ರೈತರ ಮಾಹಿತಿಯನ್ನು ಮತ್ತೆ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಕಳೆದ 15 ದಿನಗಳಿಂದ ನಮ್ಮ ಅಧಿಕಾರಿಗಳು ರಜೆ ತೆಗೆದುಕೊಳ್ಳದೆ ಕೆಲಸ ಮಾಡಿದ್ದು, ರೈತರ ಹಣ ದುರುಪಯೋಗವಾಗದಂತೆ ಅವರಿಗೆ ತಲುಪಿಸಲಾಗುವುದು. ಈಗಾಗಲೇ ಈ ಪ್ರಕ್ರಿಯೆ ಆರಂಭವಾಗಿದ್ದು, 15 ಲಕ್ಷಕ್ಕೂ ಅಧಿಕ ರೈತರಿಗೆ ಈಗಾಗಲೆ ಹಣ ತಲುಪಿಸಲಾಗಿದೆ. ಮುಂದಿನ ವಾರದೊಳಗೆ 30 ಲಕ್ಷ ರೈತರಿಗೆ ಪರಿಹಾರದ ಹಣ ತಲುಪಲಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

ಕೇಂದ್ರದಿಂದ ಇನ್ನೂ ಬಂದಿಲ್ಲ ಪರಿಹಾರ: ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ನಾಲ್ಕು ತಿಂಗಳಾದರೂ ಕೇಂದ್ರ ಸರಕಾರದಿಂದ ಬರ ಪರಿಹಾರದ ಹಣ ಇನ್ನೂ ಬಂದಿಲ್ಲ ಎಂದು ಕೃಷ್ಣ ಬೈರೇಗೌಡ ಬೇಸರ ವ್ಯಕ್ತಪಡಿಸಿದರು.

48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಎನ್‍ಡಿಆರ್ ಎಫ್ ಮಾರ್ಗಸೂಚಿ ಅನ್ವಯ 18,177.44 ಕೋಟಿ ರೂ.ಪರಿಹಾರ ನೀಡುವಂತೆ ಸೆ.22ರಂದೆ ಕೇಂದ್ರ ಕೃಷಿ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿದೆ. ಭಾರತ ಸರಕಾರದ ಬರ ಅಧ್ಯಯನ ತಂಡ ಅ.4 ರಿಂದ 9ರ ನಡುವೆ ಭೇಟಿ ನೀಡಿ, ವರದಿಯನ್ನೂ ಸಲ್ಲಿಸಿದೆ ಎಂದು ಅವರು ಹೇಳಿದರು.

ಆದರೂ, ಕೇಂದ್ರ ಸರಕಾರ ಈವರೆಗೆ ನಮ್ಮ ಮನವಿಯ ಮೇಲೆ ಸಭೆ ನಡೆಸಿ ತೀರ್ಮಾನ ತೆಗೆದುಕೊಂಡಿಲ್ಲ. ಸಭೆ ನಡೆಸುವುದಾಗಿ ಅಮಿತ್ ಶಾ ಹೇಳಿದ್ದರೂ ಉಪಯೋಗವಾಗಿಲ್ಲ. ಹೀಗಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಣಾಮ ರಾಜ್ಯ ಸರಕಾರವೇ ಮೊದಲ ಕಂತಿನಲ್ಲಿ 2 ಸಾವಿರ ರೂ. ನೀಡಲು ಮುಂದಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೂ, ಮುಂಜಾಗ್ರತೆ ವಹಿಸಲು ಸೂಚಿಸಲಾಗಿದೆ. 36 ಗ್ರಾಮಗಳಲ್ಲಿ ಮಾತ್ರ ನೀರಿನ ಕೊರತೆ ಇದೆ. ಈ ಎಲ್ಲ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. 139 ಗ್ರಾಮಗಳಿಗೆ ಬೋರ್‍ವೆಲ್ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಅವರು ಹೇಳಿದರು.

ತುಂಗಭದ್ರಾ ಹೊರತುಪಡಿಸಿ ಉಳಿದ ಎಲ್ಲ ಅಣೆಕಟ್ಟೆಗಳಲ್ಲೂ ಕುಡಿಯಲು ಬೇಕಾದಷ್ಟು ನೀರಿನ ಸಂಗ್ರಹಣೆ ಇದೆ. ಹೀಗಾಗಿ ಅಣೆಕಟ್ಟೆಗಳಲ್ಲಿನ ಸಂಗ್ರಹಣೆ ನೀರನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಫೆಬ್ರವರಿ ಮೊದಲ ವಾರದೊಳಗಾಗಿ ಎಲ್ಲ ತಾಲೂಕುಗಳಲ್ಲೂ ಕಡ್ಡಾಯವಾಗಿ ಟಾಸ್ಕ್ ಫೋರ್ಸ್ ಸಭೆ ನಡೆಸುವಂತೆ ತಹಶೀಲ್ದಾರ್ ಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಮೇವಿಗೂ ಕೊರತೆ ಇಲ್ಲ: ಚಿತ್ರದುರ್ಗದ ಕೆಲವು ಭಾಗಗಳನ್ನು ಹೊರತುಪಡಿಸಿ ರಾಜ್ಯದ ಬೇರೆಲ್ಲೂ ಮೇವಿನ ಕೊರತೆ ಇಲ್ಲ. ಈಗಾಗಲೇ 7 ಲಕ್ಷ ಮೇವಿನ ಬಿತ್ತನೆ ಬೀಜದ ಕಿಟ್ ಅನ್ನು ಉಚಿತವಾಗಿ ವಿತರಿಸಲಾಗಿದೆ. ಫೆಬ್ರವರಿಯಲ್ಲಿ ಮತ್ತೊಮ್ಮೆ ಕಿಟ್ ನೀಡಲಿದ್ದೇವೆ. 16 ಜಿಲ್ಲೆಗಳಲ್ಲಿ ಮೇವು ಖರೀದಿಗೆ ಟೆಂಡರ್ ನಡೆದಿದೆ ಎಂದು ಅವರು ಮಾಹಿತಿ ನೀಡಿದರು.

ಎಸಿ-ತಹಶೀಲ್ದಾರ್ ನ್ಯಾಯಾಲಯಗಳ ಪ್ರಗತಿ: ಉಪ ವಿಭಾಗಾಧಿಕಾರಿ (ಎಸಿ) ನ್ಯಾಯಾಲಯ ಗಳಲ್ಲಿ ಐದು ವರ್ಷಕ್ಕೆ ಮೇಲ್ಪಟ್ಟ 59,800 ಪ್ರಕರಣಗಳು ಇದ್ದವು. ಕಳೆದ ಮೂರು ತಿಂಗಳಲ್ಲಿ 33 ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ತಹಶೀಲ್ದಾರ್ ನ್ಯಾಯಾಲಯದಲ್ಲಿದ್ದ 2215 ಪ್ರಕರಣಗಳನ್ನು 170ಕ್ಕೆ ಇಳಿಸಲಾಗಿದೆ. ರೈತರು ತಕರಾರು ಅರ್ಜಿಗಳ ಇತ್ಯರ್ಥಕ್ಕಾಗಿ ದಿನಂಪ್ರತಿ ಸರಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲಾಗಿದೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News