ಕೆಎಸ್ಸಾರ್ಟಿಸಿ 63ನೇ ಸಂಸ್ಥಾಪನಾ ದಿನಾಚರಣೆ | ವಿವಿಧ ಕಾರ್ಯಕ್ರಮಗಳಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ

Update: 2024-10-16 15:24 GMT

ಬೆಂಗಳೂರು : ಬುಧವಾರದಂದು ಇಲ್ಲಿನ ಶಾಂತಿನಗರದಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ(ಕೆಎಸ್ಸಾರ್ಟಿಸಿ) ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-2ರ ಆವರಣದಲ್ಲಿ ನಿಗಮದ 63ನೆ ಸಂಸ್ಥಾಪನಾ ದಿನಾಚರಣೆಯಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ ನೀಡಿದರು.

ಅಪಘಾತಕ್ಕೆ ಒಳಪಟ್ಟು ಮೃತಪಟ್ಟ ಮೂವರು ಸಿಬ್ಬಂದಿಗಳ ಅವಲಂಬಿತರಿಗೆ ಅಪಘಾತ ವಿಮಾ ಪರಿಹಾರ ಯೋಜನೆಯಡಿ ತಲಾ 1 ಕೋಟಿ ರೂ. ಚೆಕ್ ನೀಡಲಾಯಿತು. ಈವರೆಗೂ 20 ಸಿಬ್ಬಂದಿಗಳ ಅವಲಂಬಿತರಿಗೆ ರೂ.20 ಕೋಟಿ ಪರಿಹಾರ ನೀಡಲಾಗಿದೆ.

ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್ ಮತ್ತಿತರ ಕಾರಣಗಳಿಂದ ಮರಣವನ್ನಪ್ಪಿದ 37 ಸಿಬ್ಬಂದಿಗಳ ಅರ್ಹ ಪ್ರಕರಣಗಳಲ್ಲಿ ಕುಟುಂಬದ ಸದಸ್ಯರಿಗೆ ತಲಾ 10 ಲಕ್ಷ ರೂ.ಗಳ ಪರಿಹಾರದ ಚೆಕ್ ಅನ್ನು ನೌಕರರ ಕುಟುಂಬ ಕಲ್ಯಾಣ ಪರಿಹಾರ ಯೋಜನೆಯಡಿ ನೀಡಲಾಯಿತು. ಈವರೆಗೂ 93 ಸಿಬ್ಬಂದಿಗಳ ಅವಲಂಭಿತರಿಗೆ 9.30 ಕೋಟಿ ರೂ.ಗಳ ಪರಿಹಾರ ನೀಡಲಾಗಿದೆ.

ನಿಗಮದಲ್ಲಿ ಕಾಲಕಾಲಕ್ಕೆ ಉಂಟಾಗುವ ಬೆಳವಣಿಗೆ, ನೌಕರರ ಮಕ್ಕಳು ಮಾಡಿರುವ ವಿಶೇಷ ಸಾಧನೆ, ವಿಶೇಷ ಲೇಖನಗಳು ಇತ್ಯಾದಿಗಳನ್ನು ಒಳಗೊಂಡಿರುವ ನಿಯತಕಾಲಿಕೆ ‘ಸಾರಿಗೆ ಸಂಪದ’ ಹಾಗೂ ನಿಗಮದ ವಾಹನಗಳ ಪುನಶ್ಚೇತನ ಕಾರ್ಯದ ಕುರಿತು ಹೊರತಂದಿರುವ ಕೈಪಿಡಿ, ಆರ್.ಟಿ.ಓ. ಕೈಪಿಡಿ ಮತ್ತು ಸಾರಿಗೆ ಸಂಸ್ಥೆಗಳ ಒಂದು ವರ್ಷದ ಸಾಧನೆ ಕುರಿತು ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.

ವಾಹನ ಪುನಚ್ಚೇತನಕ್ಕಾಗಿ ಪ್ರಾದೇಶಿಕ ಕಾರ್ಯಗಾರ ಬೆಂಗಳೂರು ಮತ್ತು ಹಾಸನಕ್ಕೆ ತಲಾ 3 ಲಕ್ಷ ರೂ.ಗಳು, 13 ವಿಭಾಗಗಳಿಗೆ ತಲಾ 2 ಲಕ್ಷ ರೂ. ಹಾಗೂ 3 ವಿಭಾಗಗಳಿಗೆ ತಲಾ 1 ಲಕ್ಷ ರೂ.ಗಳ ನಗದು ಪುರಸ್ಕಾರ ಹಾಗೂ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಲಾಯಿತು.

ಪ್ರಾದೇಶಿಕ ಕಾರ್ಯಾಗಾರ, ಬೆಂಗಳೂರು ಮತ್ತು ಹಾಸನದಲ್ಲಿ ನಿಗಮದ ವತಿಯಿಂದ ಕ್ಯಾಂಟೀನ್ ನಡೆಸಲಾಗುತ್ತಿದೆ. ಈ ಕ್ಯಾಂಟೀನ್‍ಗಳು ಹಳೆಯದಾಗಿರುವ ಕಾರಣ ಆಧುನೀಕರಣಗೋಳಿಸಿ ಉನ್ನತೀಕರಣಗೋಳಿಸಲು ಪ್ರತಿ ಕಾರ್ಯಾಗಾರಕ್ಕೆ ತಲಾ 25 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿ, ಸಿಬ್ಬಂದಿಗಳಿಗೆ ಹೆಚ್ಚಿನ ಸೌಕರ್ಯ ಒದಗಿಸಲಾಯಿತು.

ಚಿತ್ರದುರ್ಗ ವಿಭಾಗದ ಪಾವಗಡ ಘಟಕವು ತನ್ನ ಶಿಸ್ತು ಬದ್ದ ಕಾರ್ಯಾಚರಣೆ ಹಾಗೂ ಚಾಲನಾ ಸಿಬ್ಬಂದಿಗಳ ಜಾಗರೂಕ ಚಾಲನೆ ಸೇವೆಯನ್ನು ಗುರುತಿಸಿ ಘಟಕಕ್ಕೆ 2ಲಕ್ಷ ರೂ.ಗಳು ಹಾಗೂ ಘಟಕ ವ್ಯವಸ್ಥಾಪಕರಿಗೆ 10 ಸಾವಿರ ರೂ. ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ನಿಗಮದಲ್ಲಿ ಸೇವೆಯಲ್ಲಿದ್ದಾಗ ಮೃತರಾದ 152 ಸಿಬ್ಬಂದಿಗಳ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನಿಗಮದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅವರಿಗೆ ನೇಮಕಾತಿ ಆದೇಶವನ್ನು ನೀಡಲಾಯಿತು. ನಿಗಮದಲ್ಲಿ ಪ್ರಪ್ರಥಮವಾಗಿ ಪುನಶ್ಚೇತನಗೊಳಿಸಿದ ಐರಾವತ ಕ್ಲಬ್‍ಕ್ಲಾಸ್ ವಾಹನಗಳಿಗೆ ಚಾಲನೆ ನೀಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News