ಮಡಿಕೇರಿ | ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ; ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತಕ್ಕೆ ಹಾನಿ
ಮಡಿಕೇರಿ ಆ.25 : ಜಿಲ್ಲಾ ಕೇಂದ್ರ ಮಡಿಕೇರಿಯ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿರುವ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತಕ್ಕೆ ಸರ್ಕಾರಿ ಬಸ್ಸೊಂದು ಢಿಕ್ಕಿಯಾಗಿ ಹಾನಿಗೊಳಗಾಗಿರುವ ಘಟನೆ ಶುಕ್ರವಾರ ವರದಿಯಾಗಿದೆ.
ಮಡಿಕೇರಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಮೈಸೂರಿನತ್ತ ತೆರಳುತ್ತಿದ್ದ ಬಸ್, ಸ್ಕ್ವಾ.ಲೀ.ಅಜ್ಜಮಾಡ ದೇವಯ್ಯ ವೃತ್ತದ ಎಡಭಾಗಕ್ಕಾಗಿ ಸಾಗುವ ಹಂತದಲ್ಲಿ ಬಸ್‍ನ ಪಾಶ್ರ್ವ ವೃತ್ತಕ್ಕೆ ಢಿಕ್ಕಿಯಾಗಿದೆ.
ಅವಘಡಕ್ಕೆ ಕಾರಣವಾದ ಬಸ್ ಮೈಸೂರು ಡಿಪೋಕ್ಕೆ ಸೇರಿದ್ದು, ಇದು ಪ್ರತಿನಿತ್ಯ ಧರ್ಮಸ್ಥಳ, ಸುಬ್ರಹ್ಮಣ್ಯ, ಮಡಿಕೇರಿ ಮತ್ತು ಮೈಸೂರು ನಡುವೆ ಸಂಚರಿಸುತ್ತಿತ್ತು. ಇಂದು ಬಸ್‍ನ್ನು ಚಾಲಕ ಮಧು ಎಂಬವರು ಚಲಾಯಿಸುತ್ತಿದ್ದರು.
ಬಸ್ ಢಿಕ್ಕಿಯಿಂದ ವೃತ್ತದ ಎಡಭಾಗಕ್ಕೆ ಹಾನಿಯಾಗಿದ್ದು, ಅಲ್ಲಿನ ಕಲ್ಲು ಇಟ್ಟಿಗೆಗಳು ನೆಲಕ್ಕೆ ಉರುಳಿದೆ. ಅದೃಷ್ಟವಶಾತ್ ಸ್ಕ್ವಾ.ಲೀ. ದೇವಯ್ಯ ಅವರ ಪ್ರತಿಮೆಗೆ ಯಾವುದೇ ಹಾನಿಯಾಗಿಲ್ಲ.
ಕೆಲ ದಿನಗಳ ಹಿಂದಷ್ಟೆ ನಗರದ ಜ.ಕೆ.ಎಸ್. ತಿಮ್ಮಯ್ಯ ವೃತ್ತಕ್ಕೆ ಬಸ್ ಡಿಕ್ಕಿಯಾಗಿ, ಪ್ರತಿಮೆ ಮಗುಚಿ, ವೃತ್ತ ಧ್ವಂಸಗೊಂಡಿತ್ತು. ಇದೀಗ ಹಳೆಯ ಖಾಸಗಿ ಬಸ್ ನಿಲ್ದಾಣದ ಸ್ಕ್ವಾ.ಲೀ. ದೇವಯ್ಯ ಅವರ ವೃತ್ತಕ್ಕೆ ಬಸ್ ಢಿಕ್ಕಿಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸ್ಕ್ವಾ.ಲೀ. ಅಜ್ಜಮಾಡ ದೇವಯ್ಯ ಪ್ರತಿಮೆ ಸ್ಥಾಪನೆಗೆ ಶ್ರಮಿಸಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಬೇಸರ ವ್ಯಕ್ತಪಡಿಸಿದರು.
ಇದೇ ಸಂದರ್ಭ ಘಟನೆಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಸರ್ಕಾರಿ ಬಸ್ ಡಿಪೋ ಮ್ಯಾನೆಜರ್ ಗೀತಾ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳೀಯ ಪೊಲೀಸರು ಸ್ಥಳ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.