ಕುಮಾರಸ್ವಾಮಿಯವರದು ಅವಕಾಶವಾದಿ ಮೈತ್ರಿ: ಸಚಿವ ಎಂ.ಬಿ. ಪಾಟೀಲ್

Update: 2024-08-04 17:59 GMT

ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಿಂದೆ ಬಿಜೆಪಿ, ಕಾಂಗ್ರೆಸ್ ಜೊತೆ ಸೇರಿಕೊಂಡು ಸರಕಾರ ರಚಿಸಿ, ಸಿಎಂ ಹುದ್ದೆ ಅಲಂಕರಿಸಿದ್ದರು. ಇದೀಗ ಪುನಃ ಬಿಜೆಪಿ ಜೊತೆ ಹೋಗಿದ್ದು, ಅವರದು ಅವಕಾಶವಾದಿ ಮೈತ್ರಿ. ಅವರು ತಮ್ಮ ಸರಕಾರವನ್ನೇ ಉಳಿಸಿಕೊಳ್ಳಲಿಲ್ಲ. ಈಗ ನಮ್ಮ ಸರಕಾರವನ್ನು ಉರುಳಿಸುವ ಮಾತುಗಳನ್ನಾಡುತ್ತಿದ್ದಾರೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಟೀಕಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಕುಮಾರಸ್ವಾಮಿ ಮೊದಲು ಪಾದಯಾತ್ರೆಗೆ ತಮ್ಮ ನೈತಿಕ ಬೆಂಬಲವೂ ಇಲ್ಲ ಎಂದರು. ಆಮೇಲೆ ಯಾರದೋ ಒತ್ತಡಕ್ಕೆ ಮಣಿದು ಕಾಟಾಚಾರಕ್ಕೆ ಪಾದಯಾತ್ರೆಗೆ ಹೋಗಿದ್ದಾರಷ್ಟೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಯಾವ ತಪ್ಪೂ ಇಲ್ಲ. ಸ್ವತಃ ಮುಡಾ ತಪ್ಪು ಮಾಡಿ, ಒಪ್ಪಿಕೊಂಡಿದೆ. ನಿಯಮಗಳಂತೆಯೇ ಸಿಎಂ ಪತ್ನಿಗೆ ಬದಲಿ ನಿವೇಶನಗಳನ್ನು ಅದು ಕೊಟ್ಟಿದೆ. ಇದರಲ್ಲಿ ಸಿದ್ದರಾಮಯ್ಯರ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಅವರು ಸಚಿವರ ಸಭೆ ಕರೆದಿರುವುದರಲ್ಲಿ ತಪ್ಪೇನೂ ಇಲ್ಲ. ಪಕ್ಷದ ಹಿತದೃಷ್ಟಿಯಿಂದ ಅವರು ನಮಗೆ ಸಲಹೆ ಕೊಡಬಹುದಷ್ಟೆ. ಇದಕ್ಕಿಂತ ಹೆಚ್ಚು ಈ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಸ್ಪಷ್ಟಣೆ ನೀಡಿದ ಅವರು, ಪಿಎಸ್ಸೈ ಒಬ್ಬರು ಸಾವಿನ ಹಿಂದೆ ಅಲ್ಲಿನ ಕಾಂಗ್ರೆಸ್ ಶಾಸಕರ ಕೈವಾಡವೇನೂ ಇಲ್ಲ. ಈಗ ಪ್ರತಿಯೊಂದಕ್ಕೂ ಶಾಸಕರು ಮತ್ತು ಮಂತ್ರಿಗಳನ್ನು ದೂರುವುದು ಒಂದು ಕಾಯಿಲೆಯಾಗಿದೆ ಎಂದು ಬೇಸರ ಹೊರಹಾಕಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News