ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕೆನ್ನುವವರು ಮತಿಹೀನರು : ಲಕ್ಷ್ಮಣ ಸವದಿ

Update: 2024-12-18 10:18 GMT

ಲಕ್ಷ್ಮಣ ಸವದಿ

ಬೆಳಗಾವಿ : ಮಹಾರಾಷ್ಟ್ರದ ಮತಿಹೀನರು ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂದು ಹೇಳಿಕೆ ನೀಡಿದ್ದಾರೆ. ಈ ಹಿಂದೆ ನಮ್ಮ ಬೆಳಗಾವಿ ಭಾಗದವರು ಶಾಸಕರಾಗಿ ಮಹಾರಾಷ್ಟ್ರ ವಿಧಾನಸಭೆಗೆ ಹೋಗಿರುವ ಉದಾಹರಣೆಗಳಿವೆ. ಮುಂಬೈ ಮೇಲೆ ನಮ್ಮ ಹಕ್ಕು ಇದೆ ಎಂದು ಕಾಂಗ್ರೆಸ್‍ನ ಹಿರಿಯ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.

ಬುಧವಾರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತು ನಡೆದ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಂಬೈ ಕರ್ನಾಟಕಕ್ಕೆ ನೀಡಿ, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ನೀಡುತ್ತೇವೆ. ಇಲ್ಲವಾದರೇ, ಮುಂಬೈಯನ್ನು ಕೇಂದ್ರಾಡಳಿತ ಪ್ರದೇಶ ಮಾಡುವಂತೆ ರಾಜ್ಯ ಸರಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸೋಣ ಎಂದು ಹೇಳಿದರು.

ಬೆಂಗಳೂರು ಬೆಳೆದರೆ ಇಡೀ ರಾಜ್ಯ ಬೆಳೆದಂತಲ್ಲ. ಇವತ್ತು ಬೆಂಗಳೂರಿನಲ್ಲಿ ಸಂಚಾರದಟ್ಟಣೆ, ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಕೈಗಾರಿಕೆಗಳು ಉತ್ತರ ಕರ್ನಾಟಕ ಭಾಗಕ್ಕೆ ಬರಲು ಸರಕಾರ ವಿಶೇಷ ಸವಲತ್ತುಗಳನ್ನು ಕೊಡಬೇಕು. ಇಲ್ಲಿ ಕೃಷಿ ಕ್ರಾಂತಿ ಆದರೆ ಸಾಲದು, ಔದ್ಯೋಗಿಕ ಕ್ರಾಂತಿಯೂ ಆಗಬೇಕು. ಕೃಷ್ಣಾ ಮೇಲ್ದಂಡೆ ಯೋಜನೆಯಿಂದ 73 ಸಾವಿರ ಎಕರೆ ಮುಳುಗಡೆ ಆಗುತ್ತದೆ. 1.33 ಲಕ್ಷ ಎಕರೆ ಪುನರ್‌ ವಸತಿಗೆ ಬೇಕಾಗುತ್ತದೆ. ಇದಕ್ಕಾಗಿ ಭಾರಿ ಪ್ರಮಾಣದಲ್ಲಿ ಹಣಕಾಸಿನ ಅಗತ್ಯವಿದೆ ಎಂದು ಅವರು ಹೇಳಿದರು.

ಆದುದರಿಂದ, ಸರಕಾರ ನೀರಾವರಿ ಬಾಂಡ್ ಬಿಡುಗಡೆ ಮಾಡಿದರೆ ಹಣ ಸಂಗ್ರಹ ಮಾಡಬಹುದು. ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ನಮ್ಮ ಎಲ್ಲ ಸಂಸದರು ಪಕ್ಷಾತೀತವಾಗಿ ಶ್ರಮಿಸಬೇಕು. ಸಕ್ಕರೆಯಿಂದಲೇ 9800 ಕೋಟಿ ರೂ.ಜಿಎಸ್‍ಟಿಯನ್ನು ನಾವು ಕೇಂದ್ರಕ್ಕೆ ಪಾವತಿ ಮಾಡುತ್ತಿದ್ದೇವೆ. ಕೇಂದ್ರ ಸರಕಾರ ಎಥೆನಾಲ್ ನೀತಿಯಲ್ಲಿನ ಲೋಪಗಳನ್ನು ಸರಿಪಡಿಸಿ ಕಬ್ಬು ಬೆಳೆಗಾರರಿಗೆ ನೆರವು ನೀಡಬೇಕು ಎಂದು ಲಕ್ಷ್ಮಣ ಸವದಿ ಆಗ್ರಹಿಸಿದರು.

ಕೆಲವು ಸಕ್ಕರೆ ಕಾರ್ಖಾನೆ ಮಾಲಕರು ಕಬ್ಬು ತೂಕದಲ್ಲಿ ಮೋಸ ಮಾಡಿ, ರೈತರಿಗೆ ವಂಚಿಸುತ್ತಿದ್ದಾರೆ. ಆದುದರಿಂದ, ಎಪಿಎಂಸಿ ಮೂಲಕ ಸಕ್ಕರೆ ಕಾರ್ಖಾನೆಗಳ ಹೊರಗಡೆ ತೂಕ ಮಾಪನ ಯಂತ್ರಗಳನ್ನು ಅಳವಡಿಸಬೇಕು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಆ ಭಾಗದ ಆರು ಜಿಲ್ಲೆಗಳಲ್ಲಿ ಅಭಿವೃದ್ಧಿ ಆಗುತ್ತಿದೆ. ಆದರೆ, ಬಯಲು ಸೀಮೆ ಅಭಿವೃದ್ಧಿ ಮಂಡಳಿಯಲ್ಲಿರುವ ನಮಗೆ ಸೂಕ್ತ ಅನುದಾನ ಸಿಗುತ್ತಿಲ್ಲ ಎಂದು ಅವರು ಹೇಳಿದರು.

‘ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ಕರೆದು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಸದನದಲ್ಲಿ ಇರಬೇಕಾದ ಸಚಿವರು ತಮ್ಮ ಕೆಲಸದ ಒತ್ತಡದಿಂದ ವಿಧಾನಪರಿಷತ್, ತಮ್ಮ ಕಚೇರಿ ಅಥವಾ ಬೇರೆ ಕಡೆಯಿರಬಹುದು. ಆದರೆ, ಕಲಾಪ ನಡೆಯುವಾಗ ಯಾವ ಅಧಿಕಾರಿಗಳು ಇಲ್ಲಿ ಇರಬೇಕೋ ಅವರು ಇದ್ದಾರಾ? ನಾವು ಮಾತನಾಡುವುದನ್ನು ಬರೆದಿಟ್ಟುಕೊಳ್ಳುವವರು ಯಾರು? ಅಧಿಕಾರಿಗಳೇನು ಇಸ್ಪಿಟ್ ಆಡಲು ಹೋಗಿದ್ದಾರಾ? ಬಾರ್‌ ಗೆ ಹೋಗಿದ್ದಾರಾ? ಅಥವಾ ಗೋವಾಗೆ ಹೋಗಿದ್ದಾರಾ?. ನಾವೇನು ಇಲ್ಲಿ ಬೊಬ್ಬೆ ಹಾಕಲು ಬಂದಿಲ್ಲ’

-ಲಕ್ಷ್ಮಣ ಸವದಿ, ಕಾಂಗ್ರೆಸ್ ಸದಸ್ಯ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News