ಲಾಲ್‍ಬಾಗ್‍ನ ಫಲಪುಷ್ಪ ಪ್ರದರ್ಶನಕ್ಕೆ ತೆರೆ: 1.79 ಕೋಟಿಗೂ ಅಧಿಕ ಹಣ ಸಂಗ್ರಹ

Update: 2023-08-15 15:43 GMT

ಬೆಂಗಳೂರು, ಆ.15: ಲಾಲ್‍ಬಾಗ್‍ನಲ್ಲಿ ಸತತ 12 ದಿನಗಳ ಕಾಲ ಏರ್ಪಡಿಸಿದ್ದ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಮಂಗಳವಾರ ತೆರೆ ಬಿದ್ದಿದ್ದು, ಇಲ್ಲಿ ವಿಶೇಷವಾಗಿ ನಿರ್ಮಿಸಿದ್ದ ಕರ್ನಾಟಕದ ಎರಡನೇ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಪುತ್ಥಳಿ ಹಾಗೂ ವಿಧಾನಸೌಧದ ಹೂವಿನ ಪ್ರತಿಬಿಂಬಗಳನ್ನು ವೀಕ್ಷಿಸಲು ಕೊನೆಯ ದಿನ ಸಸ್ಯಕಾಶಿಗೆ ಜನಸಾಗರವೇ ಹರಿದು ಬಂತು.

ಆ.4ರಿಂದ 15ರವರೆಗೆ ಸುಮಾರು 8 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, ಅಂದಾಜು 1.79 ಕೋಟಿಗೂ ಅಧಿಕ ಹಣ ಸಂಗ್ರಹವಾಗುವ ಮೂಲಕ ದಾಖಲೆ ನಿರ್ಮಿಸಿದೆ. ಅದರಲ್ಲೂ ಸ್ವಾತಂತ್ರ್ಯೋತ್ಸವದ ರಜಾ ದಿನವಾದ ಆ.15ರಂದು ಒಂದೇ ದಿನ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಪ್ರದರ್ಶನ ವೀಕ್ಷಿಸಿದರು ಎಂದು ತೋಟಗಾರಿಕೆ ಜಂಟಿ ನಿರ್ದೇಶಕಿ ಕುಸುಮಾ ತಿಳಿಸಿದ್ದಾರೆ.

ರಜಾ ದಿನಗಳಂದು ಹೆಚ್ಚಿನ ವೀಕ್ಷಕರು ಆಗಮಿಸಿದ್ದರು. ಪ್ರವೇಶ ಶುಲ್ಕವೂ 70ರಿಂದ 80 ರೂ.ಗಳಿದ್ದುದರಿಂದ ಹೆಚ್ಚಿನ ಹಣ ಸಂಗ್ರಹಗೊಂಡಿದೆ. ಒಟ್ಟಾರೆ, ಈ ಬಾರಿ ಹಿಂದಿಗಿಂತಲೂ ಅತಿ ಹೆಚ್ಚು ಹಣ ಸಂಗ್ರಹವಾಗಿದೆ. ಇದೆಲ್ಲವೂ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ನೆನಪಿನ ಮಹಿಮೆ ಎಂದು ತೋಟಗಾರಿಕೆ ಅಧಿಕಾರಿಗಳು ಹೇಳಿದ್ದಾರೆ.

ಆ.4ರಂದು ಆರಂಭವಾದ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ವಿಧಾನಸೌಧದ ಕಲಾಕೃತಿ ಗಾಜಿನ ಮನೆಯ ಮುಖ್ಯ ಆಕರ್ಷಣೆಯಾಗಿತ್ತು. ಅದರಲ್ಲೂ, ವಿಧಾನಸೌಧದ 18 ಅಡಿ ಪ್ರತಿಕೃತಿ, 14 ಅಡಿಯ ಕೆಂಗಲ್ ಹನುಮಂತಯ್ಯ ಪ್ರತಿಮೆ ಈ ಬಾರಿಯ ಫಲಪುಷ್ಪ ಪ್ರದರ್ಶನದ ವಿಶೇಷ.

ಕೊನೆಯ ದಿನ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ರಜೆ ಇದ್ದಿದ್ದರಿಂದ ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ನೋಡುಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಹೀಗಾಗಿ, ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಗಾಜಿನ ಮನೆಯ ಹೊರಾಂಗಣದಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಭದ್ರತಾ ಸಿಬ್ಬಂದಿ, ಸ್ವಯಂ ಸೇವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು.

ಆ.13ರ ಭಾನುವಾರ 1.25 ಲಕ್ಷ ಜನರು ಭೇಟಿ ನೀಡಿದ್ದರು. ಅಂದು ಪ್ರವೇಶ ಶುಲ್ಕದ ರೂಪದಲ್ಲಿ ಒಟ್ಟಾರೆ 80.50 ಲಕ್ಷ ರೂ. ಸಂಗ್ರಹವಾಗಿತ್ತು ಎಂದು ತೋಟಗಾರಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರದರ್ಶನದ 12 ದಿನಗಳಲ್ಲೂ ಲಾಲ್‍ಬಾಗ್‍ನ ಪ್ರವೇಶ ದ್ವಾರಗಳ ಒಳಗೂ, ಹೊರಗೂ ಜನಸಂದಣಿ ಹೆಚ್ಚಾಗಿತ್ತು. ಅಷ್ಟೇ ಅಲ್ಲ, ಈ ಮಾರ್ಗದಲ್ಲಿ ಸಂಚರಿಸುವ ಬಿಎಂಟಿಸಿ ಬಸ್‍ಗಳು, ಮೆಟ್ರೋ ರೈಲುಗಳಲ್ಲಿ ಕೂಡ ಪ್ರಯಾಣಿಕರ ಸಂಖ್ಯೆ ಎರಡರಿಂದ ಮೂರು ಪಟ್ಟು ಹೆಚ್ಚಾಗಿತ್ತು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆಯಿದ್ದರೂ, ಕೆಲವರು ಕುಟುಂಬ ಸಮೇತರಾಗಿ ಮೆಟ್ರೊದಲ್ಲೇ ಲಾಲ್‍ಬಾಗ್‍ಗೆ ಆಗಮಿಸುತ್ತಿದ್ದರು. ಹೀಗಾಗಿ, ಲಾಲ್‍ಬಾಗ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ಮೆಟ್ರೊ ರೈಲಿನಲ್ಲಿ ಜನದಟ್ಟಣೆ ಹೆಚ್ಚಿತ್ತು ಎಂದು ತೋಟಗಾರಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


 








 


 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News