ಮರ ನೆಡಲು ನೀಡಿದ ಜಮೀನು ಸಾರ್ವಜನಿಕರಿಗೆ ಮಂಜೂರು ಮಾಡಿದಂತಾಗುವುದಿಲ್ಲ: ಹೈಕೋರ್ಟ್

Update: 2024-01-22 14:29 GMT

ಬೆಂಗಳೂರು: ಸರಕಾರಿ ಜಮೀನಿನಲ್ಲಿ ಮರ, ಗಿಡಗಳನ್ನು ಬೆಳೆಸಲು ಸಾರ್ವಜನಿಕರಿಗೆ ಅವಕಾಶ ನೀಡಿದಲ್ಲಿ, ಜಮೀನನ್ನು ತಮಗೆ ಮಂಜೂರು ಮಾಡಿದಂತೆ ಎಂಬ ಅಭಿಪ್ರಾಯಕ್ಕೆ ಬರುವಂತಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಮರ ನೆಡುವುದಕ್ಕಾಗಿ 1951ರಲ್ಲಿ ನೀಡಿದ್ದ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡ ಬಳಿಕ ಪರಿಹಾರ ನೀಡದ ಸರಕಾರದ ಕ್ರಮ ಎತ್ತಿ ಹಿಡಿದಿದ್ದ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ತುಮಕೂರು ತಾಲೂಕಿನ ಯಲದಡ್ಲು ಗ್ರಾಮದ ನಂಜುಂಡಪ್ಪ ಮತ್ತಿತರರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.

ಈ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ, ಈ ಆದೇಶ ಮಾಡಿ, ಮೇಲ್ಮನವಿ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಜೊತೆಗೆ, ಮರಗಳನ್ನು ಬೆಳೆಸುವ ಹಕ್ಕನ್ನು ಮಾತ್ರ ನೀಡಿದಾಗ ಆ ಭೂಮಿಯಲ್ಲಿ ಮರಗಳನ್ನು ಮಾತ್ರ ಬೆಳೆಸಬಹುದಾಗಿದೆ. ಆದರೆ, ಜಮೀನು ಮಂಜೂರು ಮಾಡಿದಂತೆ ಎಂದು ಪರಿಗಣಿಸಲಾಗದು ಎಂದು ಪೀಠ ತಿಳಿಸಿದೆ.

ಪ್ರಕರಣವೇನು?: ತುಮಕೂರು ತಾಲೂಕಿನ ಯಲದಡ್ಲು ಗ್ರಾಮದ ನಿವಾಸಿಯಾಗಿದ್ದ ಸೀಬಿಲಿಂಗಯ್ಯ ಎಂಬುವರಿಗೆ ಸರಕಾರ 1951ರ ನ.16ರಂದು ಅದೇ ಗ್ರಾಮದ ಸರ್ವೇ ಸಂಖ್ಯೆ 96ರಲ್ಲಿನ ಸರಕಾರಿ ಜಮೀನಿನಲ್ಲಿ ಮರ ಬೆಳೆಸಿಕೊಳ್ಳುವುದಕ್ಕೆ ಅನುಮತಿ ನೀಡಿತ್ತು. ಆದರೆ, ಜಮೀನಿನ ಮೇಲಿನ ಯಾವುದೇ ಹಕ್ಕು ಅವರಿಗೆ ಹಸ್ತಾಂತರಿಸಿರುವುದಿಲ್ಲ.

ಈ ಭಾಗದಲ್ಲಿ ಸರಕಾರ ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸುವುದಕ್ಕಾಗಿ 2008ರ ಡಿ.4ರಂದು ಕೆಐಎಡಿಬಿಯಿಂದ ಅರ್ಜಿಯಲ್ಲಿ ಪ್ರಸ್ತಾಪಿಸಿದ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಲು ಅಧಿಸೂಚನೆ ಹೊರಡಿಸಿರುತ್ತದೆ. ಈ ಭೂಮಿ ಸ್ವಾಧೀನ ಪಡೆದುಕೊಳ್ಳಲು ಕೆಐಎಡಿಬಿ ಯಾವುದೇ ಪರಿಹಾರ ನೀಡಿರುವುದಿಲ್ಲ. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿರುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News