ಸದನಕ್ಕೆ ತಡವಾಗಿ ಆಗಮನ: ಯುವ ಶಾಸಕರಿಗೆ ಸ್ಪೀಕರ್ ಖಾದರ್ ಕ್ಲಾಸ್!
ಬೆಳಗಾವಿ, ಡಿ.13: ಹಿರಿಯರು ಸದನಕ್ಕೆ ಸರಿಯಾದ ಸಮಯಕ್ಕೆ ಬಂದಿದ್ದಾರೆ. ನೀವು ಸದನಕ್ಕೆ ವಿಳಂಬವಾಗಿ ಆಗಮಿಸಲು ಕಾರಣವೇನು? ಎಂದು ಯುವ ಶಾಸಕರನ್ನು ಸ್ಪೀಕರ್ ಯು.ಟಿ ಖಾದರ್ ಪ್ರಶ್ನಿಸಿದರು.
ಇಂದು ಬೆಳಗ್ಗೆ ವಿಧಾನಸಭಾ ಅಧಿವೇಶನದ ಆರಂಭದಲ್ಲಿ ಯುವ ಶಾಸಕರಾದ ಜೆಡಿಎಸ್ ಸದಸ್ಯ ಶರಣಗೌಡ ಕಂದಕೂರ್, ಶರಣು ಸಲಗಾರ್ ಹಾಗೂ ಬಸವರಾಜು ಶಿವಗಂಗಾ ಅವರಿಗೆ ಸ್ಪೀಕರ್ ಕ್ಲಾಸ್ ತಗೊಂಡರು.
ವಿಧಾನಸಭೆಯಲ್ಲಿ ತಮ್ಮ ಪ್ರಶ್ನೆಗೆ ಉತ್ತರ ಪಡೆಯಲು ಶರಣಗೌಡ ಕಂದಕೂರ್ ಗೆ ಮುಂದಾದಾಗ ಸ್ಪೀಕರ್ ಯು.ಟಿ ಖಾದರ್ ಸದನಕ್ಕೆ ತಡವಾಗಿ ಏಕೆ ಬಂದಿದ್ದು? ಎಂದು ಪ್ರಶ್ನಿಸಿದರು.
ಇದಕ್ಕೆ 'ಕ್ಷಮಿಸಿ ಸರ್' ಎಂದು ಶಾಸಕ ಶರಣಗೌಡ ಕಂದಕೂರ್ ಉತ್ತರಿಸಿದಾಗ, ಸಾರಿ ಕೇಳಲಿಲ್ಲ, ಕಾರಣ ಏನು ಎಂದು ಕೇಳಿದ್ದು ಎಂದರು. ಕೆ.ಜೆ.ಜಾರ್ಜ್, ಎಚ್.ಕೆ. ಪಾಟೀಲ್ ಅಂತಹ ಹಿರಿಯರು, ಸುರೇಶ್ ಕುಮಾರ್, ಆರಗ ಜ್ಞಾನೇಂದ್ರ, ಆರ್.ಅಶೋಕ್ ಸಮಯಕ್ಕೆ ಸರಿಯಾಗಿ ಬಂದಿದ್ದಾರೆ. ನೀವು ಏಕೆ ಬಂದಿಲ್ಲ ಎಂದು ಪ್ರಶ್ನಿಸಿದರು.
ಸರ್.. ಸಚಿವರು ಮೀಟಿಂಗ್ ಕರೆದಿದ್ರು ಅದಕ್ಕೆ ನಾವು ಎಲ್ಲಿ ಹೋಗಿ ಕುಳಿತಿದ್ದೆ. ಸಭೆ ಮುಂದೂಡಲಾಗಿರುವ ಬಗ್ಗೆ
ನಮಗೆ ಮಾಹಿತಿನೇ ಕೊಟ್ಟಿಲ್ಲ. ಅದಕ್ಕೆ ನಾವು ಅಲ್ಲಿ ಹೋಗಿ ಕುಳಿತಿದ್ವಿ ಎಂದು ಕಂದಕೂರ್ ಸಮರ್ಥನೆ ನೀಡಿದರು.
ಹಿರಿಯರು ಸದನಕ್ಕೆ 9 ಗಂಟೆಗೆ ಬಂದು ಮಾದರಿ ಆಗಿದ್ದಾರೆ. ಆದ್ದರಿಂದ 'ನೆಕ್ಟ್ ಟೈ ಬೇಗ ಬನ್ನಿ' ಎಂದು ಸ್ಪೀಕರ್ ಯು.ಟಿ.ಖಾದರ್ ಸೂಚಿಸಿದರು.
ಅದೇ ರೀತಿ ಶರಣು ಸಲಗಾರ್ ಅವರೂ ತಡವಾಗಿ ಸದನಕ್ಕೆ ಬಂದಿದ್ದಕ್ಕೆ ಸ್ಪೀಕರ್ ಪ್ರಶ್ನೆ ಮಾಡಿದರು. ರೂಂನಿಂದ ಬರಲು ಕಾರು ವ್ಯವಸ್ಥೆ ಇರಲಿಲ್ಲ. ಹಾಗಾಗಿ ತಡವಾಯಿತು ಎಂದು ಶರಣು ಸಲಗಾರ್ ಉತ್ತರಿಸಿದರು. ಇನ್ನು ಬಸವರಾಜು ಶಿವಗಂಗಾ ತಡವಾಗಿ ಬಂದಿದ್ದರು. ಏಕೆ ಲೇಟ್ ಬಂದ್ರಿ ಎಂದು ಸ್ಪೀಕರ್ ಖಾದರ್ ಪ್ರಶ್ನಿಸಿದಾಗ, ಬಿಳಿ ಶರ್ಟ್ ಹಾಕೊಂಡು ಬಂದಿದ್ದೆ, ಆದರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳ ನಡೆಗೆ ಪ್ರತಿಭಟನಾತ್ಮಕವಾಗಿ ಕಪ್ಪು ಬಟ್ಟೆ ಧರಿಸಿ ಬಂದಿದ್ದೇನೆ. ಅದಕ್ಕೆ ತಡವಾಯಿತು ಎಂದು ಸಮರ್ಥನೆ ನೀಡಿದರು.
ಕಪ್ಪು ಶರ್ಟ್ ಧರಿಸಿ ಸದನಕ್ಕೆ ಬರಲು ಅವಕಾಶ ಇಲ್ಲ. ಏನೇ ಬೇಸರ ಇದ್ದರೂ, ಬೆಳಗ್ಗೆ ಬೇಗ ಎದ್ದು ಸರಿಯಾದ ಸಮಯಕ್ಕೆ ಸದನಕ್ಕೆ ಬನ್ನಿ ಎಂದು ಸೂಚಿಸಿದರು.