ಡಿ.4ರಿಂದ ಬೆಳಗಾವಿಯಲ್ಲಿ ವಿಧಾನ ಮಂಡಲ ಚಳಿಗಾಲದ ಅಧಿವೇಶನ: ಸಚಿವ ಸತೀಶ್ ಜಾರಕಿಹೊಳಿ

Update: 2023-10-21 17:51 GMT

ಸಂಗ್ರಹ ಚಿತ್ರ - ಸುವರ್ಣ ವಿಧಾನಸೌಧ

ಬೆಳಗಾವಿ, ಅ.21: ಬೆಳಗಾವಿಯಲ್ಲಿ ಡಿ.4 ರಿಂದ 15ರ ವರೆಗೆ ವಿಧಾನ ಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನ ನಡೆಯಲಿದ್ದು, ಈಗಾಗಲೇ ಜಿಲ್ಲಾಡಳಿತಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಶನಿವಾರ ಇಲ್ಲಿನ ಸಾಂಬ್ರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಒಟ್ಟು 10 ದಿನಗಳ ಕಾಲ ನಡೆಯಲಿರುವ ಈ ಅಧಿವೇಶನವನ್ನು ಅದ್ಧೂರಿಯಾಗಿ ಆಯೋಜಿಸಲಾಗುವುದುʼ ಎಂದರು.

ಬೆಳಗಾವಿಯಲ್ಲಿನ ಗುಂಪುಗಾರಿಕೆಯಿಂದಲೆ ರಾಜ್ಯ ಸರಕಾರ ಪತನವಾಗಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯದಲ್ಲಿ ಆಗಾಗ ಕೆಲವು ಸಂಗತಿಗಳು ನಡೆಯುವುದು ಸಹಜ. ಆದರೆ, ನಮ್ಮ ಸರಕಾರ ಯಾವುದೇ ಕಾರಣಕ್ಕೂ ಪತನ ಆಗುವುದಿಲ್ಲ ಎಂದರು.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ನಮ್ಮ ನಡುವೆ ಯಾವುದೆ ಭಿನ್ನಾಭಿಪ್ರಾಯ, ಮುನಿಸು ಇಲ್ಲ. ಸುತ್ತಿ ಬಳಸಿ ಯಾಕೆ ಪ್ರತಿಯೊಂದು ವಿಚಾರವನ್ನು ಅವರ ಬಳಿ ತೆಗೆದುಕೊಂಡು ಹೋಗುತ್ತೀರಾ. ಲಕ್ಷ್ಮಿ ಹೆಬ್ಬಾಳ್ಕರ್ ಗೆ ವಿರೋಧ ಮಾಡುವುದಿದ್ದರೆ ಕಳೆದ ವಿಧಾನಪರಿಷತ್ ಚುನಾವಣೆ ಸಂದರ್ಭದಲ್ಲಿ ನನ್ನ ಸಹೋದರ ಲಖನ್ ಜಾರಕಿಹೊಳಿಗೆ ನಾನು ವಿರೋಧ ಮಾಡುತ್ತಿರಲಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News