ಬನ್ನೇರುಘಟ್ಟದಲ್ಲಿ ಚಿರತೆ, ಜಿಂಕೆಗಳ ಸರಣಿ ಸಾವು: ರಾಜ್ಯದ ಎಲ್ಲ ಮೃಗಾಲಯಗಳಲ್ಲಿ ಕಟ್ಟೆಚ್ಚರ ವಹಿಸಲು ಸಚಿವ ಈಶ್ವರ ಖಂಡ್ರೆ ಸೂಚನೆ

Update: 2023-09-21 13:31 GMT

ಫೋಟೊ- ಉದ್ಯಾನವನಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿರುವ ಸಚಿವರು

ಬೆಂಗಳೂರು, ಸೆ.21: ರಾಜ್ಯದ ಯಾವುದೆ ಮೃಗಾಲಯಗಳಲ್ಲಿ ಬೆಕ್ಕಿನ ಜಾತಿಗೆ ಸೇರಿದ ವನ್ಯಮೃಗಗಳಿಗೆ ಸೋಂಕು ಬಾರದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.

ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನದಲ್ಲಿ ಬೆಕ್ಕುಗಳಿಗೆ ತಗಲುವ ಮಾರಕ ಫೆಲಿನ್ ಪ್ಯಾನ್ಲೂಕೋಪೇನಿಯಾ ವೈರಾಣು ಸೋಂಕಿನಿಂದ 7 ಚಿರತೆ ಮರಿಗಳು ಮತ್ತು ಉದರ ಸಂಬಂಧಿ ಕಾಯಿಲೆಯಿಂದ ಹಾಗೂ ಪರಸ್ಪರ ಸಂಘರ್ಷದಿಂದ 16 ಜಿಂಕೆಗಳು ಸಾವಿಗೀಡಾಗಿರುವ ಹಿನ್ನೆಲೆಯಲ್ಲಿ ಗುರುವಾರ ಉದ್ಯಾನವನಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿ, ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಈ ಉದ್ಯಾನವನದಲ್ಲಿ ಚಿರತೆಗಳಿಗೆ ಸೋಂಕು ಬಂದಿರುವ ಹಿನ್ನೆಲೆಯಲ್ಲಿ ಇಲ್ಲಿನ ಯಾವುದೆ ಸಿಬ್ಬಂದಿ ರಾಜ್ಯದ ಬೇರೆ ಯಾವುದೆ ಮೃಗಾಲಯಕ್ಕೆ ಭೇಟಿ ನೀಡದಂತೆ ಆದೇಶ ನೀಡಿದ ಈಶ್ವರ್ ಖಂಡ್ರೆ, ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯ ಮತ್ತು ಇತರ ಮೃಗಾಲಯಗಳಲ್ಲಿ ಬೆಕ್ಕಿನ ಜಾತಿಯ ಪ್ರಾಣಿಗಳು ಅಂದರೆ ಚಿರತೆ, ಸಿಂಹ, ಹುಲಿ, ಕಾಡುಬೆಕ್ಕು ಇತ್ಯಾದಿಗಳಿಗೆ ಅಗತ್ಯವಿದ್ದರೆ ಲಸಿಕೆ ನೀಡುವಂತೆ ಸೂಚಿಸಿದರು.

ಜಿಂಕೆಗಳ ಸಾವಿನ ಕುರಿತಂತೆ ಸುದೀರ್ಘ ಚರ್ಚೆ ನಡೆಸಿದ ಅವರಿಗೆ, ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯಿಂದ ಸಂರಕ್ಷಣೆ ಮಾಡಿ ತರಲಾದ ಜಿಂಕೆಗಳಿಗೆ ಉದರ ಸಂಬಂಧಿ ಕಾಯಿಲೆಗಳಿತ್ತು ಹೀಗಾಗಿ ಅವುಗಳನ್ನು ಪ್ರತ್ಯೇಕವಾಗಿ ಇಡಲಾಗಿತ್ತು. ಅವು ಪರಸ್ಪರ ಕಚ್ಚಾಟದಿಂದ ಮತ್ತು ಸೋಂಕಿನಿಂದ ಮೃತಪಟ್ಟಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

 

ಮೃಗಾಲಯ ಅತ್ಯಂತ ಸುರಕ್ಷಿತ ಮತ್ತು ಸಂರಕ್ಷಿತ ತಾಣವಾಗಿದ್ದು ಇಲ್ಲಿ ಇಷ್ಟು ಪ್ರಮಾಣದಲ್ಲಿ ಮೃಗಗಳ ಸಾವು ನಿಜಕ್ಕೂ ಆಘಾತಕಾರಿ. ಇನ್ನು ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆವಹಿಸಿ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಈಶ್ವರ್ ಖಂಡ್ರೆ ಸೂಚನೆ ನೀಡಿದರು.

ಅರಣ್ಯ ಅಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳು ಸಮನ್ವಯದೊಂದಿಗೆ ಎಲ್ಲ ಪ್ರಾಣಿಗಳನ್ನು ಗಮನವಿಟ್ಟು ಪರೀಕ್ಷಿಸಿ ಅವುಗಳ ಆರೈಕೆ ಮತ್ತು ಸಂರಕ್ಷಣೆಗೆ ಆದ್ಯತೆ ನೀಡಬೇಕು. ಯಾವುದೇ ವೈಮನಸ್ಯ ಮನಸ್ತಾಪದಿಂದ ಸಂಸ್ಥೆಗೆ, ಸರಕಾರಕ್ಕೆ ಕೆಟ್ಟ ಹೆಸರು ಬಾರದಂತೆ ಮುಂಜಾಗ್ರತೆ ವಹಿಸಬೇಕು ಎಂದು ಅವರು ತಿಳಿಸಿದರು.

ಯಾವುದೇ ವನ್ಯಮೃಗಗಳು ಹಠಾತ್ ಅಥವಾ ಅನುಮಾಸ್ಪದ ರೀತಿಯಲ್ಲಿ ಸಾವಿಗೀಡಾದರೆ ತಕ್ಷಣವೇ ಸರಕಾರಕ್ಕೆ ಮತ್ತು ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಅವರು ಆದೇಶಿಸಿದರು. ಸಭೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಪ್ರಧಾನ ಕಾರ್ಯದರ್ಶಿ(ಅರಣ್ಯ ವಿಭಾಗ) ಸಂಜಯ್ ಬಿಜ್ಜೂರ್, ವನ್ಯಜೀವಿ ಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಶ್ ಮಾಲ್ಕಡೆ, ಅರಣ್ಯ ಪಡೆಯ ಮುಖ್ಯಸ್ಥ ರಾಜೀವ್ ರಂಜನ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News