ಕೇಂದ್ರ ಸರಕಾರ ತನ್ನ ಕಾರ್ಯವೈಖರಿಯನ್ನು ಪರಾಮರ್ಶೆ ಮಾಡಿಕೊಳ್ಳಲಿ: ರಣದೀಪ್ ಸಿಂಗ್ ಸುರ್ಜೇವಾಲ

Update: 2024-01-12 13:26 GMT

ಬೆಂಗಳೂರು: ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕನ್ನು ಈಗಾಗಲೇ ಅನುಷ್ಠಾನಗೊಳಿಸಿದ್ದು, ಇಂದು 5ನೆ ಗ್ಯಾರಂಟಿ ‘ಯುವನಿಧಿ’ ಜಾರಿಗೊಳಿಸಲಾಗಿದೆ. ನಾವು ನುಡಿದಂತೆ ನಡೆದಿದ್ದೇವೆ. ಕೇಂದ್ರದ ಬಿಜೆಪಿ ಸರಕಾರ ತನ್ನ ಕಾರ್ಯವೈಖರಿಯನ್ನು ಮತ್ತೊಮ್ಮೆ ಪರಾಮರ್ಶೆ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದ್ದಾರೆ.

ಶುಕ್ರವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಬದ್ಧತೆಯುಳ್ಳ ಪಕ್ಷ, ಜನರ ವಿಶ್ವಾಸವನ್ನು ಉಳಿಸಿಕೊಂಡಿದೆ. ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3 ಸಾವಿರ ರೂ. ಹಾಗೂ ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂ.ಗಳನ್ನು ಎರಡು ವರ್ಷಗಳ ಅವಧಿವರೆಗೆ ನೀಡುತ್ತಿದ್ದೇವೆ. ಈ ಮೂಲಕ ಕರುನಾಡಿಗೆ ನಮ್ಮ ಪಕ್ಷ ನೀಡಿದ್ದ ವಾಗ್ದಾನವನ್ನು ಈಡೇರಿಸಿರುವ ಸಂತೃಪ್ತಿ ತಮಗಿದೆ ಎಂದು ತಿಳಿಸಿದ್ದಾರೆ.

ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಿದ್ದೇವೆ. ಇನ್ನು ಹಸಿದವರಿಗೆ ಅನ್ನ ನೀಡುವ ಅನ್ನಭಾಗ್ಯವನ್ನೂ ಅಷ್ಟೇ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದೇವೆ. ಆದರೆ, ನಮಗೆ ಈ ಯೋಜನೆ ಮೂಲಕ ತಲಾ 5 ಕೆಜಿ ಅಕ್ಕಿ ಕೊಡಬೇಕು ಎಂಬ ಆಶಯ ಇತ್ತು. ಆದರೆ, ಕೇಂದ್ರ ಸರಕಾರ ನಮಗೆ ಅಕ್ಕಿಯನ್ನು ಕೊಡಲು ನಿರಾಕರಣೆ ಮಾಡಿತು ಎಂದು ಅವರು ಹೇಳಿದ್ದಾರೆ.

ಇದರಿಂದ ನಾವೇನೂ ಜಗ್ಗಲಿಲ್ಲ. ಕೊಟ್ಟ ಮಾತಿಗೂ ತಪ್ಪಲಿಲ್ಲ. ಐದು ಕೆಜಿ ಅಕ್ಕಿಯ ಬದಲಾಗಿ ಹಣವನ್ನು ನೀಡಿದೆವು. ಅನ್ನ ಭಾಗ್ಯ ಯೋಜನೆಯಲ್ಲಿ 1.8 ಕೋಟಿ ಕುಟುಂಬಗಳ 3.92 ಕೋಟಿ ಸದಸ್ಯರಿಗೆ ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ 5 ಕೆಜಿ ಅಕ್ಕಿಗೆ ಒಟ್ಟು 170 ರೂ.ಗಳನ್ನು ಪ್ರತಿ ತಿಂಗಳು ನೀಡುತ್ತಿದ್ದೇವೆ. ಇದಕ್ಕಾಗಿ ಮಾಸಿಕವಾಗಿ 646 ಕೋಟಿ ರೂ.ಗಳನ್ನು ರಾಜ್ಯ ಸರಕಾರದಿಂದ ಖರ್ಚು ಮಾಡಲಾಗುತ್ತಿದೆ ಎಂದು ಸುರ್ಜೇವಾಲ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಪರಾಮರ್ಶೆ ಮಾಡಿಕೊಳ್ಳಲಿ: ನಾವು ನುಡಿದಂತೆ ನಡೆದಿದ್ದೇವೆ. ಆದರೆ, ಕೇಂದ್ರದ ಬಿಜೆಪಿ ಸರಕಾರ ನುಡಿದಂತೆ ನಡೆದಿದೆಯೇ? ಈ ಪ್ರಶ್ನೆಯನ್ನು ಆ ಪಕ್ಷದವರು ಒಮ್ಮೆ ತಮಗೆ ತಾವೇ ಹಾಕಿಕೊಳ್ಳಬೇಕು. ತಮ್ಮ ಕಾರ್ಯವೈಖರಿಯನ್ನು ಮತ್ತೊಮ್ಮೆ ಪರಾಮರ್ಶೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಮೋದಿ ಪ್ರತಿವರ್ಷ 2 ಕೋಟಿ ಉದ್ಯೋಗವನ್ನು ಸೃಷ್ಟಿ ಮಾಡುವುದಾಗಿ ಹೇಳಿದ್ದರು. ಆದರೆ, ಈಗ ಏನಾಗಿದೆ? ಅಷ್ಟು ಪ್ರಮಾಣದ ಉದ್ಯೋಗಗಳು ಸೃಷ್ಟಿಯಾದವೇ? 15 ಲಕ್ಷ ರೂ.ಗಳನ್ನು ಪ್ರತಿಯೊಬ್ಬ ಭಾರತೀಯನ ಖಾತೆಗೆ ಹಾಕುವುದಾಗಿ ಹೇಳಿದ್ದರು. ಆ ಹಣವನ್ನೂ ಹಾಕಲಿಲ್ಲ. ಅವರ ಭರವಸೆಗಳು ಭರವಸೆಯಾಗಿಯೇ ಉಳಿಯಿತು. ಇಲ್ಲಿ ನಾವು ಭರವಸೆಯನ್ನು ಈಡೇರಿಸಿದ್ದೇವೆ ಎಂದು ಸುರ್ಜೇವಾಲ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಅಣಕಿಸುವ ಬಿಜೆಪಿಯವರು, ತಾವು ಆಡಳಿತದಲ್ಲಿ ಇರುವ ಬೇರೆ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ವಿರೋಧ ಪಕ್ಷದಲ್ಲಿರುವ ಬಿಜೆಪಿ ಹಾಗೂ ಜೆಡಿಎಸ್‍ನವರು ಗ್ಯಾರಂಟಿ ಯೋಜನೆಗಳನ್ನು ಅಣಕಿಸುವ ಮೂಲಕ ಈ ಯೋಜನೆಯ ಫಲಾನುಭವಿಗಳಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಅವರು ಕಿಡಿಗಾರಿದ್ದಾರೆ.

ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಯುವ ಜನತೆಗೆ ಕೌಶಲ್ಯಯುಕ್ತ ಶಿಕ್ಷಣ ನೀಡಿ ಅವರಿಗೆ ಉದ್ಯೋಗಗಳು ಹೆಚ್ಚು ಸಿಗುವಂತೆ ಮಾಡುತ್ತೇವೆ. ರಾಷ್ಟ್ರ ನಿರ್ಮಾಣಕ್ಕೆ ಯುವ ಜನತೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಬದ್ಧವಾಗಿದೆ. ಬಿಜೆಪಿ ಸೇರಿದಂತೆ ಅದರ ಮಿತ್ರಪಕ್ಷಗಳ ಅಪಪ್ರಚಾರಕ್ಕೆ ಯಾರೂ ಕಿವಿಗೊಡಬೇಡಬಾರದು. ಬಿಜೆಪಿಯವರ ಭಾಷಣದಿಂದ ಯುವ ಜನತೆ ಭ್ರಮನಿರಸವಾಗಿರುವುದು ಕಂಡುಬಂದಿದೆ. ವಾಸ್ತವ ಏನು ಎಂಬುದು ಎಲ್ಲರಿಗೂ ಗೊತ್ತಾಗಿದೆ ಎಂದು ಸುರ್ಜೇವಾಲ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News