ಮುಖ್ಯಮಂತ್ರಿಗಳು ಬಡವರಿಗೆ ಭೂಮಿಯ ಹಕ್ಕನ್ನೂ ನೀಡಲಿ: ಸಚಿವ ಮಧು ಬಂಗಾರಪ್ಪ ಮನವಿ

Update: 2023-12-10 15:18 GMT

ಬೆಂಗಳೂರು: ರಾಜ್ಯಕ್ಕೆ ಹಲವಾರು ಭಾಗ್ಯಗಳನ್ನು ಕೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡವರಿಗೆ ಭೂಮಿಯ ಹಕ್ಕನ್ನೂ ನೀಡಲಿ ಎಂದು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮನವಿ ಮಾಡಿದ್ದಾರೆ.

ರವಿವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಆರ್ಯ ಈಡಿಗ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯದವರಿಗೆ ಭೂ ಹಕ್ಕನ್ನು ನೀಡಬೇಕೆಂದು ಏಳೆಂಟು ಹೋರಾಟ ಮಾಡಿದ್ದೇವೆ. ದೇವರಾಜ ಅರಸು ನಂತರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪನವರು ಬಡವರಿಗೆ ಭೂಮಿ ಕೊಟ್ಟರು. ಹಲವಾರು ಭಾಗ್ಯಗಳನ್ನು ಕೊಟ್ಟಿರುವ ಮುಖ್ಯಮಂತ್ರಿಗಳು ನಮ್ಮ ಸಮುದಾಯದ ಬಡವರಿಗೆ ಬಗರ್ ಹುಕುಂ ನೀಡಬೇಕು ಎಂದರು.

ಶರಾವತಿ ಯೋಜನೆಯಿಂದ ಸಂತ್ರಸ್ತರಾಗಿ ಭೂಮಿಯನ್ನು ಕೊಟ್ಟವರು ಇಂದು ಕತ್ತಲಲ್ಲಿದ್ದಾರೆ. ರಾಜ್ಯಕ್ಕೆ ಬೆಳಕು ಕೊಟ್ಟು ಕತ್ತಲಲ್ಲಿ ಇರುವವರು ಇದ್ದಾರೆ. ಈ ಸಮುದಾಯಕ್ಕೆ ಹಕ್ಕುಪತ್ರವನ್ನು ನೀಡುವ ಕೆಲಸ ಮಾಡಬೇಕೆಂದು ಕೋರುತ್ತೇನೆ ಎಂದು ಮಧು ಬಂಗಾರಪ್ಪ ಮನವಿ ಮಾಡಿದರು.

ನಾವೆಲ್ಲ ಹೆಂಡವನ್ನು ಮಾರಿಕೊಂಡು ಬಂದ ಕುಟುಂಬದವರು. ಕುಲಕಸುಬವನ್ನು ನಂಬಿಕೊಂಡಿರುವುದರಿಂದ ಈಗ ಸಮುದಾಯದ ಅನೇಕರು ಬೀದಿಪಾಲಾಗಿದ್ದಾರೆ. ನಮ್ಮ ಸಮುದಾಯವನ್ನು ಮೇಲೆತ್ತುವ ಭರವಸೆಯನ್ನು ಸರಕಾರ ನೀಡಬೇಕು ಎಂದು ಹೇಳಿದರು.

ಸಿದ್ದರಾಮಯ್ಯರಲ್ಲಿ ಬಂಗಾರಪ್ಪರನ್ನು ಕಾಣುತ್ತೇನೆ!

ಒಬ್ಬರು ಬಂಗಾರಪ್ಪನವರನ್ನು ಕಳೆದುಕೊಂಡಿದ್ದಾರೆ. ಆದರೆ ಲಕ್ಷಾಂತರ ಬಂಗಾರಪ್ಪನವರು ನಮ್ಮಲ್ಲಿದ್ದಾರೆ. ಸಿದ್ದರಾಮಯ್ಯನವರಲ್ಲಿ ನಾನು ಬಂಗಾರಪ್ಪನವರನ್ನು ಕಾಣುತ್ತಿದ್ದೇನೆ. ಅವರಿಂದ ಬಡವರ ಪರ ಕಳಕಳಿ, ಚಿಂತನೆ ನೋಡುತ್ತಿದ್ದೇನೆ. ನಿಮ್ಮಲ್ಲಿ ಸಾಮಥ್ರ್ಯ ದುಪ್ಪಟ್ಟಾಗಬೇಕು ಎಂದು ಮಧು ಬಂಗಾರಪ್ಪ ಆಶಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News