ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಮುಸ್ಲಿಮ್ ಸಮುದಾಯ ದೂರು ದಾಖಲಿಸಲಿ: ಸಚಿವ ಸತೀಶ್ ಜಾರಕಿಹೊಳಿ

Update: 2023-12-25 14:57 GMT

ಬೆಳಗಾವಿ: ವಿವಾದಾತ್ಮಕ ಹೇಳಿಕೆ ನೀಡಿರುವ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಮುಸ್ಲಿಮ್ ಸಮುದಾಯದವೇ ದೂರು ದಾಖಲಿಸಬೇಕು ಎಂದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼವಿವಾದಾತ್ಮಕ ಹೇಳಿಕೆ ನೀಡಿರುವ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಸರಕಾರವೇ ಸ್ವಯಂಪ್ರೇರಿತವಾಗಿ ದೂರು ದಾಖಲಿಸಬೇಕು ಎಂದೇನೂ ಇಲ್ಲ. ಈತನ ವಿರುದ್ಧ ಮುಸ್ಲಿಮ್ ಸಮುದಾಯದವೇ ದೂರು ದಾಖಲಿಸಬೇಕುʼ ಎಂದು ಹೇಳಿದರು.

 ಹಿಜಾಬ್ ನಿಷೇಧ ವಾಪಸ್ ತೆಗೆದುಕೊಳ್ಳುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದೆವು

ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಹಿಜಾಬ್ ನಿಷೇಧ ವಾಪಸ್ ತೆಗೆದುಕೊಳ್ಳುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದೆವು. ಈಗ ತಮ್ಮ ನಿಲುವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಅಲ್ಲದೆ, ಈ ಹಿಂದೆ ಹಲವು ವರ್ಷಗಳಿಂದ ತರಗತಿಗಳಲ್ಲಿ ಹಿಜಾಬ್ ಧಾರಣೆಗೆ ಅವಕಾಶವಿತ್ತು. ಆದರೆ ಹಿಂದಿನ ಬಿಜೆಪಿ ಸರಕಾರ ಮಾತ್ರ ಅದನ್ನು ನಿಷೇಧಿಸಿತ್ತು. ನಾವು ಅದನ್ನು ಹಿಂಪಡೆಯುವ ಚಿಂತನೆ ನಡೆಸಿದ್ದೇವೆ ಎಂದು ಅವರು ತಿಳಿಸಿದರು.

ಇನ್ನೂ, ರಾಜ್ಯದಲ್ಲಿ ಒಟ್ಟು 10 ಸಾವಿರ ಕೋಟಿ ರೂ. ಮೊತ್ತದ ರಸ್ತೆ ಯೋಜನೆಗಳಿವೆ. ಇದರಲ್ಲಿ ಎರಡು ಸಾವಿರ ಕೋಟಿ ರೂ. ಖರ್ಚಾಗಿದೆ. ಇನ್ನೂ ಎಂಟು ಸಾವಿರ ಕೋಟಿ ಹಣ ಖರ್ಚಾಗಬೇಕು. ಈ ಹಣವನ್ನು ಖರ್ಚು ಮಾಡದಿದ್ದರೆ ಕಾಮಗಾರಿ ಬಂದ್ ಮಾಡುತ್ತಾರೆ. ರಸ್ತೆ ಕಾಮಗಾರಿಗೆ ತೊಂದರೆ ಇರುವುದನ್ನು ಸರಿಪಡಿಸಬೇಕು. ಜತೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ರಾಷ್ಟ್ರೀಯ ಹೆದ್ದಾರಿ ಸಲುವಾಗಿ ಚರ್ಚೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.

ರಾಜ್ಯ ವ್ಯಾಪಿ ಸುಮಾರು 12 ವರ್ಷದಿಂದ 15 ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಸ್ಥಗಿತಗೊಂಡಿವೆ. ಆರು ತಿಂಗಳಿಂದ ಈ ಎಲ್ಲ ಯೋಜನೆ ಪರಿಹರಿಸಲು ಪ್ರಯತ್ನಿಸಲಾಗಿದೆ ಎಂದ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಹಣ ಕೊರತೆ ಇಲ್ಲ. ಗುತ್ತಿಗೆದಾರರು ನಾವು ತಡ ಮಾಡಿದಷ್ಟು ಕೋರ್ಟ್‍ಗೆ ಹೋಗಿ ಹೆಚ್ಚು ಹಣ ತೆಗೆದುಕೊಂಡು ಬರುತ್ತಾರೆ. ಕೆಲ ರಸ್ತೆ ಅಭಿವೃದ್ಧಿ ಸಂಬಂಧ ಅರಣ್ಯ ಇಲಾಖೆ ಸಮಸ್ಯೆ ಇದೆ. ಇದನ್ನು ಶೀಘ್ರದಲ್ಲಿಯೇ ಬಗೆಹರಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

**

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News