ಕಾವೇರಿ ವಿಷಯದಲ್ಲಿ ರಾಜ್ಯ ಸರಕಾರ ಜನರ ಹಿತ ಕಾಯಲಿ, ನಾವು ಸಹಕಾರ ಕೊಡುತ್ತೇವೆ: ಬಸವರಾಜ ಬೊಮ್ಮಾಯಿ
ಬೆಂಗಳೂರು: ಕಾವೇರಿ ನೀರಿನ ವಿಷಯದಲ್ಲಿ ರಾಜ್ಯ ಸರ್ಕಾರ ರಾಜ್ಯದ ಜನರು ಹಾಗೂ ರೈತರ ಹಿತ ಕಾಪಾಡಲಿ, ನಾವು ಅವರಿಗೆ ಸಹಕಾರ ನೀಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ಕಾವೇರಿ ನೀರು ಹಂಚಿಕೆ ವಿಚಾರವಾಗಿ ಸುಪ್ರೀಂ ಕೋರ್ಟ್ ಹೊಸ ಪೀಠ ರಚನೆ ಮಾಡಿದೆ. ರಾಜ್ಯ ಸರಕಾರ ಇದನ್ನು ಗಂಭಿರವಾಗಿ ಪರಿಗಣಿಸಬೇಕು. ಈಗಾಗಲೇ ಟ್ರಿಬ್ಯುನಲ್ ಆದೇಶ ಬಂದು ಒಂದು ವ್ಯವಸ್ಥೆ ಇರುವ ಸಂದರ್ಭದಲ್ಲಿ ಈಗಿರುವ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಒಂದೆಡೆ ನೀರು ಬಿಡುತ್ತದೆ ಮತ್ತೊಂದೆಡೆ ವಾದ ಮಾಡುತ್ತಾರೆ. ಸುಪ್ರೀಂ ಕೋರ್ಟ್ ನಲ್ಲಿ ಕಾನೂನಾತ್ಮಕವಾಗಿ ಹೋರಾಟ ಮಾಡಲು ಪ್ರಯತ್ನ ಮಾಡಬೇಕು. ನಾವು ವಿರೋಧ ಪಕ್ಷವಾಗಿ ಎಲ್ಲ ರೀತಿಯ ಸಹಕಾರ ನೀಡಲು ಸಿದ್ದರಿದ್ದೇವೆ ಎಂದು ಹೇಳಿದರು.
ಮಂಡ್ಯ ಮೈಸೂರು ಭಾಗದ ರೈತರು ಧರಣಿ ಸತ್ಯಾಗ್ರಹ ಮಾಡುತ್ತಿದ್ದಾರೆ. ಇಡೀ ವರ್ಷ ನೀರಿನ ಕೊರತೆ ನಿರ್ವಹಣೆ ಮಾಡಬೇಕಿದೆ. ರಾಜ್ಯದ ರೈತರ ಕೂಗಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದರು.
ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಬಿಜೆಪಿ , ಜೆಡಿಎಸ್ ನವರಿಗೆ ಉತ್ತರ ಕೊಡಬೇಕಿಲ್ಲ ಎಂದು ಹೇಳಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಡಿ.ಕೆ. ಶಿವಕುಮಾರ್ ನೀರಾವರಿ ಸಚಿವರು ಅವರು ರಾಜ್ಯದ ಜನತೆಗೆ, ರೈತರಿಗೆ, ಬೆಂಗಳೂರಿನ ಜನತೆಗೆ ಉತ್ತರ ಕೊಡಲಿ, ನಾವು ವಿರೋಧ ಪಕ್ಷವಾಗಿ ನಮ್ಮ ಅಭಿಪ್ರಾಯ ಹೇಳಿದ್ದೇವೆ. ರೈತರನ್ನು ಕೋರ್ಟ್ ಗೆ ಹೋಗಿ ಎಂದರೆ ಹೇಗೆ ಅವರು ರಾಜ್ಯದ ಜನರ ಹಿತ ಕಾಯಲಿ ನಾವು ಅವರಿಗೆ ಸಹಕಾರ ನೀಡುತ್ತೇವೆ ಎಂದು ಹೇಳಿದರು.