ಬದುಕಿರುವವರೆಗೂ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗದು: ಹೈಕೋರ್ಟ್
ಬೆಂಗಳೂರು, ಆ.2: ದೋಷಿಗೆ ಕ್ಷಮಾಪಣೆಗೆ ಅವಕಾಶವಾಗದಂಥ ‘ಬದುಕಿರುವವರೆಗೂ’ ಜೀವಾವಧಿ ಶಿಕ್ಷೆ ಎಂಬ ವಿಶೇಷ ವಿಭಾಗದ ಶಿಕ್ಷೆಯನ್ನು ವಿಚಾರಣಾಧೀನ ನ್ಯಾಯಾಲಯಗಳು ವಿಧಿಸಲಾಗದು ಎಂದು ಹೈಕೋರ್ಟ್ ಹೇಳಿದೆ.
ಪ್ರೇಯಸಿಯ ಗಂಡನನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ದೋಷಿ ಎಂದು ಘೋಷಿತನಾಗಿ ಶಿಕ್ಷೆಗೆ ಗುರಿಯಾಗಿದ್ದಾತ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠವು ಭಾಗಶಃ ಪುರಸ್ಕರಿಸಿದೆ. ಆರೋಪಿಯನ್ನು ದೋಷಿ ಎಂದು ಘೋಷಿಸಿದ್ದ ವಿಚಾರಣಾಧೀನ ನ್ಯಾಯಾಲಯವು ಆತ ಬದುಕಿರುವವರೆಗೂ ಜೀವಾವಧಿ ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಿತ್ತು.
ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿಗಳ ಕ್ಷಮಾಪಣೆಗೆ ಸಂಬಂಧಿಸಿದ ಭಾರತ ಸರಕಾರ ವರ್ಸಸ್ ವಿ ಶ್ರೀಹರನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ನ್ಯಾಯಾಲಯ ಉಲ್ಲೇಖಿಸಿದೆ. ಘೋರ ಅಪರಾಧಗಳ ಹೆಚ್ಚಳದ ಹಿನ್ನೆಲೆಯಲ್ಲಿ ಪ್ರಕರಣಗಳ ಇತ್ಯರ್ಥ ವಿಳಂಬವಾಗುತ್ತಿರುವುದು ಮತ್ತು ಸಂತ್ರಸ್ತರ ಹಿತಾಸಕ್ತಿಯಿಂದ ಕೆಲವು ಸಂದರ್ಭದಲ್ಲಿ ವಿಶೇಷ ವಿಭಾಗದ ಶಿಕ್ಷೆಯು ಅಗತ್ಯವಾಗಿದೆ ಎಂದು ಆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ ಎಂದು ವಿವರಿಸಲಾಗಿದೆ.
ಇಂಥ ವಿಶೇಷ ವಿಭಾಗದ ಶಿಕ್ಷೆಯನ್ನು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮಾತ್ರ ವಿಧಿಸಬಹುದೇ ವಿನಹ ವಿಚಾರಣಾಧೀನ ನ್ಯಾಯಾಲಯವಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ ಎಂದು ಹೈಕೋರ್ಟ್ ವಿವರಿಸಿದೆ.
ಮೇಲ್ಮನವಿ ವಿಚಾರಣೆ ನಡೆಸಿರುವ ಹೈಕೋರ್ಟ್ ಆರೋಪಿಗೆ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿದ್ದು, ಬದುಕಿರುವವರೆಗೂ ಶಿಕ್ಷೆ ಅನುಭವಿಸಬೇಕು ಎಂಬ ಸತ್ರ ನ್ಯಾಯಾಲಯದ ಆದೇಶವನ್ನು ಬದಿಗೆ ಸರಿಸಿದೆ. ಈ ಮೂಲಕ ವಿಚಾರಣಾಧೀನ ನ್ಯಾಯಾಲಯ ಅಂಥ ವಿಶೇಷ ವಿಭಾಗದ ಶಿಕ್ಷೆ ವಿಧಿಸಲಾಗದು ಎಂದಿದೆ.