‘ಲಿಂಗಾಯತ’ ಹಿಂದೂ ಧರ್ಮದ ಭಾಗವಲ್ಲ: ಬಸವ ತತ್ವಭಿಮಾನಿಗಳ ಆತ್ಮಾವಲೋಕನ ಸಭೆಯಲ್ಲಿ ನಿರ್ಣಯ
ಬೆಂಗಳೂರು: ಲಿಂಗಾಯತ ಧರ್ಮವು ಹಿಂದೂ ಧರ್ಮದ ಭಾಗವಲ್ಲ ಎಂದು ಸೆ.4ರಂದು ನಡೆದ ಬಸವ ತತ್ವಭಿಮಾನಿಗಳ ಆತ್ಮಾವಲೋಕನ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ.
ಲಿಂಗಾಯತ ಧರ್ಮವು ಹಿಂದೂ ಧರ್ಮದ ಭಾಗವೆಂದು ಹೇಳುತ್ತಿರುವ ಕೆಲವು ಸ್ವಾಮಿಗಳ ನಿಲುವನ್ನು ಖಂಡಿಸಿದ್ದು, ಲಿಂಗಾಯತ ಸಮಾಜ ಸಂಘಟನೆಯನ್ನು ಗಟ್ಟಿಗೊಳಿಸಲು ಮತ್ತು ಅದರ ಮೇಲೆ ನಡೆಯುತ್ತಿರುವ ದಾಳಿಯನ್ನು ವಿರೋಧಿಸಲು, ಬಸವಾನುಯಾಯಿಗಳನ್ನು ಜಾಗರತಗೊಳಿಸಲು ಎಲ್ಲ ಜಿಲ್ಲೆಗಳಲ್ಲಿ ಸಮಾವೇಶ ಆಯೋಜಿಸಲು ತೀರ್ಮಾನಿಸಲಾಗಿದೆ.
ಲಿಂಗಾಯತ ಧರ್ಮಕ್ಕೆ ವಿರುದ್ಧವಾದ ಗುಡಿ, ಸಂಸ್ಕೃತಿ, ಕರ್ಮ ಸಿದ್ಧಾಂತ, ಮಹಿಳೆಯರನ್ನು ಕೀಳಾಗಿ ಕಾಣುವುದು, ಹೋಮ-ಹವನ, ಸೇರಿ ಹಲವು ಮೂಢನಂಬಿಕೆ- ಕಂದಾಚಾರಗಳನ್ನು ಸಭೆ ವಿರೋಧಿಸಿದೆ.
ಲಿಂಗಾಯತ ಪ್ರಣಾಳಿಕೆಗೆ ಮತ್ತು ಬಸವ ಸಂವಿಧಾನಕ್ಕೆ ಅನುಸಾರವಾಗಿ ಲಿಂಗಾಯತರು ನಡೆದುಕೊಳ್ಳಬೇಕು. ಲಿಂಗಾಯತ ಧರ್ಮ ಗ್ರಂಥವಾದ ವಚನ ಸಾಹಿತ್ಯವನ್ನು ವಿಕೃತಗೊಳಿಸುವ ಮತ್ತು ಪುರೋಹಿತಶಾಹಿಯ ಪ್ರಯತ್ನವನ್ನು ಖಂಡಿಸಿದೆ.
ಸಭೆಯಲ್ಲಿ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ವಿಶ್ರಾಂತ ಪ್ರಾಧ್ಯಾಪಕ ಡಾ.ಟಿ.ಆರ್.ಚಂದ್ರಶೇಖರ್, ಎಚ್.ಎಂ ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.