ಸನ್ನದುದಾರರಿಗೆ ಕಿರುಕುಳ ಆರೋಪ | ನ.20ರಂದು ಮದ್ಯ ಮಾರಾಟ ಬಂದ್
ಬೆಂಗಳೂರು : ಅಬಕಾರಿ ಇಲಾಖೆ ಸನ್ನದುದಾರರಿಗೆ ನೀಡುತ್ತಿರುವ ಕಿರುಕುಳ ಹಾಗೂ ಇಲಾಖೆಯಲ್ಲಿ ಮಿತಿ ಮೀರಿದ ಭ್ರಷ್ಟಾಚಾರ ವಿರೋಧಿಸಿ ‘ಮದ್ಯ ಮಾರಾಟಗಾರರ ಸಂಘ’ವು ನ.20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‍ಗೆ ಕರೆ ನೀಡಿದೆ.
ಗುರುವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಶನ್‍ನ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ್ ಹೆಗ್ಡೆ ಮಾತನಾಡಿ, ‘ಅಬಕಾರಿ ಇಲಾಖೆ ಅಧಿಕಾರಿಗಳು ವರ್ಗಾವಣೆ, ಭಡ್ತಿಗಾಗಿ, ಪರವಾನಗಿ ನವೀಕರಣಕ್ಕೆ ಸೇರಿದಂತೆ ಸನ್ನದುದಾರರಿಂದ ಕೋಟ್ಯಾಂತರ ರೂ.ಹಣ ವಸೂಲಿ ಮಾಡುತ್ತಿದ್ದಾರೆ’ ಎಂದು ದೂರಿದರು.
ಅಬಕಾರಿ ಇಲಾಖೆಯ ಅಧಿಕಾರಿಗಳು ಮದ್ಯ ಮಾರಾಟ ವ್ಯಾಪಾರಿಗಳಿಂದ ಪ್ರತಿ ತಿಂಗಳು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸಂಘದ ಸಭೆಗಳಲ್ಲಿ ವ್ಯಾಪಕ ಆರೋಪಗಳು ಕೇಳಿಬರುತ್ತಿವೆ. ಅಧಿಕಾರಿಗಳ ಭ್ರಷ್ಟಾಚಾರದಿಂದಾಗಿ ರಾಜ್ಯಾದ್ಯಂತ ನಕಲಿ ಮದ್ಯ ಮಾರಾಟಗಾರರು ಹೆಚ್ಚಾಗಿದ್ದಾರೆ. ಈ ಎಲ್ಲ ಸಮಸ್ಯೆಗಳು ಮತ್ತು ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿವರಗಳನ್ನು ಆರ್ಥಿಕ ಇಲಾಖೆಯ ಅಧಿಕಾರಿಗಳ ಮತ್ತು ಸರಕಾರದ ಗಮನಕ್ಕೆ ತಂದಿದ್ದೇವೆ ಎಂದು ಗೋವಿಂದರಾಜ್ ಹೆಗ್ಡೆ ತಿಳಿಸಿದರು.
ಅಬಕಾರಿ ಇಲಾಖೆ ಅನುದಾನ ಇಲ್ಲದಿರುವ ಇಲಾಖೆಯಾಗಿರುವುದರಿಂದ ಆರ್ಥಿಕ ಸಚಿವರೇ ಈ ಖಾತೆಯನ್ನು ನಿರ್ವಹಿಸಬೇಕು ಹಾಗೂ ಇಲಾಖೆಯಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯರ ಅಧ್ಯಕ್ಷತೆಯಲ್ಲಿ ಸಭೆ ನಿಗಧಿ ಮಾಡಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಅವರು ಆಗ್ರಹಿಸಿದರು.
ಸಂಘಟನೆಯ ಪದಾಧಿಕಾರಿಗಳು ಎಂದು 500-900ಕೋಟಿ ರೂ.ಗಳ ಲಂಚದ ಬಗ್ಗೆ ಮಾತನಾಡಿಲ್ಲ. ಇಂತಹ ತಪ್ಪು ಸಂದೇಶಗಳನ್ನು ಪ್ರಧಾನಿ ಮೋದಿಗೆ ಯಾರು ರವಾನೆ ಮಾಡಿದ್ದಾರೋ ಗೊತ್ತಿಲ್ಲ. ನಾವೆಂದೂ ಯಾವ ಚುನಾವಣೆಗೂ ಹಣ ನೀಡಿದವರಲ್ಲ ಮತ್ತು ನೀಡುವವರು ಅಲ್ಲ. ಮಹಾರಾಷ್ಟ್ರದ ಚುನಾವಣೆಯಲ್ಲಿ ಮತ್ತು ರಾಜ್ಯದ ಉಪಚುನಾವಣೆಯಲ್ಲಿ ತಪ್ಪು ಪ್ರಚಾರ ನಡೆಯುತ್ತಿರುವುದು ನಮಗೆಲ್ಲ ಬೇಸರ ತರಿಸಿದೆ. ನಮ್ಮದು ರಾಜಕೀಯ ರಹಿತ ಸಂಘಟನೆ ಎಂದು ಗೋವಿಂದರಾಜ್ ಹೆಗ್ಡೆ ಸ್ಪಷ್ಟನೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಎಸ್.ಗುರುಸ್ವಾಮಿ, ಕೋಶಾಧಿಕಾರಿ ಟಿ.ಎಂ.ಮೆಹರ್‍ವಾಡೆ, ವಿಭಾಗೀಯ ಅಧ್ಯಕ್ಷರಾದ ಕರುಣಾಕರ ಹೆಗ್ಡೆ, ಜಿ.ರಾಮುಲು, ಲೋಕೇಶ್ ಹಾಗೂ ರಾಮಚಂದ್ರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.