ಹೊಸರಿತ್ತಿ ಠಾಣೆಯಲ್ಲಿ ಲಾಕಪ್ ಡೆತ್ ಆರೋಪ ಪ್ರಕರಣ: ಸಿಐಡಿ ತನಿಖೆಗೆ ಬಸವರಾಜ ಬೊಮ್ಮಾಯಿ ಆಗ್ರಹ
ಹಾವೇರಿ: ʼಇತ್ತೀಚೆಗೆ ಹೊಸರಿತ್ತಿ ಪೊಲೀಸ್ ಠಾಣೆಯಲ್ಲಿ ನಡೆದ ಲಾಕಪ್ ಡೆತ್ ಪ್ರಕರಣದ ಕುರಿತು ಸಿಐಡಿ ತನಿಖೆ ನಡೆಸಬೇಕುʼ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಈ ಕುರಿತು ಬುಧವಾರ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ʼ ಗೋವಿಂದಪ್ಪ ಪೂಜಾರ್ ಎನ್ನುವ ವ್ಯಕ್ತಿ ಹೊಸರಿತ್ತಿ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್ ಆಗಿರುವ ಬಗ್ಗೆ ಸಾಕಷ್ಟು ಅನುಮಾನಗಳು ಮೂಡುತ್ತಿವೆ. ಈ ಪ್ರಕರಣ ಸ್ಥಳೀಯ ಪೊಲೀಸರಿಂದ ವಿಚಾರಣೆ ಸಾಧ್ಯವಿಲ್ಲ. ಸಿಐಡಿ ಯಿಂದ ವಿಚಾರಣೆ ಆಗಬೇಕು ಎಂದು ಈಗಾಗಲೇ ಡಿಜಿಯವರಿಗೆ ಪತ್ರ ಬರೆದಿದ್ದೇನೆʼ ಎಂದು ಹೇಳಿದರು.
ʼಈ ಪ್ರಕರಣದಲ್ಲಿ ಬಹಳಷ್ಟು ಸಂಶಯಗಳಿವೆ. ಮೇಲ್ನೋಟಕ್ಕೆ ಪೊಲೀಸರ ಹಲ್ಲೆಯಿಂದ ವ್ಯಕ್ತಿ ಅಸ್ತವ್ಯಸ್ತವಾಗಿ ಸತ್ತಿದ್ದಾನೆಂದು ಅನಿಸುತ್ತಿದೆ. ಸ್ಪಷ್ಟವಾಗಿ ಏನೇನು ನಡೆದಿದೆ ಎಂದು ಸಮಗ್ರ ತನಿಖೆ ಆಗಬೇಕುʼ ಎಂದು ಆಗ್ರಹಿಸಿದರು.
ಸೆಪ್ಟೆಂಬರ್ 6ರಂದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸವಣೂರು ತಾಲೂಕಿನ ಇಚ್ಚಂಗಿಯಲ್ಲಿ ಗೋವಿಂದಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಹೊಸರಿತ್ತಿ ಹೊರ ಠಾಣೆಯಲ್ಲಿ ಥಳಿಸಿದ್ದರಿಂದ ತೀವ್ರ ಅಸ್ವಸ್ಥನಾಗಿದ್ದ ಗೋವಿಂದಪ್ಪ ಲಾಕಪ್ ನಲ್ಲೇ ಮೃತಪಟ್ಟಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.