ಲೋಕಸಭಾ ಚುನಾವಣೆಗೆ ಸಿದ್ಧತೆ: ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರೊಂದಿಗೆ ಸಿಎಂ, ಡಿಸಿಎಂ ಸಭೆ
Update: 2023-08-16 15:23 GMT
ಬೆಂಗಳೂರು, ಆ.16: ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಿತು.
ಕ್ಷೇತ್ರದ ಅಭಿವೃದ್ಧಿ ಕೆಲಸಗಳು-ಅನುದಾನ, ಸರಕಾರ-ಪಕ್ಷದ ಜತೆಗಿನ ಸಮನ್ವಯ ಹಾಗೂ ಲೋಕಸಭಾ ಚುನಾವಣೆ ಕುರಿತಾಗಿ ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಎಲ್ಲ ಶಾಸಕರ ಸರ್ವ ಒಮ್ಮತದ ಅಭ್ಯರ್ಥಿಯನ್ನು ಲೋಕಸಭಾ ಕಣಕ್ಕೆ ಇಳಿಸಿದರೆ, ಕ್ಷೇತ್ರವನ್ನು ಭರ್ಜರಿ ಗೆಲುವಿನ ಮೂಲಕ ಕಾಂಗ್ರೆಸ್ ವಶಕ್ಕೆ ಪಡೆಯಬಹುದಾಗಿದೆ ಎಂದು ಶಾಸಕರು ಭರವಸೆ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ, ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಸೇರಿದಂತೆ ಇತರ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.