ಲೋಕಸಭಾ ಚುನಾವಣೆ: ಶೀಘ್ರದಲ್ಲೇ ರಾಜ್ಯದ ಅಭ್ಯರ್ಥಿಗಳ ಪಟ್ಟಿ ಅಂತಿಮ: ಬಿ.ವೈ ವಿಜಯೇಂದ್ರ
ಬೆಂಗಳೂರು: ಲೋಕಸಭಾ ಚುನಾವಣೆಗೆ ಸಂಬಂಧಿಸಿ ನಾಳೆ- ನಾಡಿದ್ದು ರಾಜ್ಯದ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮಂಗಳವಾರ ದೆಹಲಿಯಲ್ಲಿ ಪ್ರಧಾನಿ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿಯ ಸಭೆಯಲ್ಲಿ ಅವರು ಭಾಗವಹಿಸಿದ್ದರು.
ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆಗೆ ಸಂಬಂಧಿಸಿ ಎಲ್ಲ 28 ಕ್ಷೇತ್ರಗಳ ಅಭ್ಯರ್ಥಿಗಳ ಕುರಿತು ಚರ್ಚೆ ನಡೆದಿದೆ. ಅಪೇಕ್ಷಿತರ ಕುರಿತು ಚರ್ಚೆ ಆಗಿದೆ. ಅಂತಿಮವಾಗಿ ಕೇಂದ್ರದ ವರಿಷ್ಠರು ಕುಳಿತು ನಿರ್ಧಾರ ಮಾಡುತ್ತಾರೆ. ಬಹುಶಃ ಇನ್ನು ಎರಡ್ಮೂರು ದಿನಗಳಲ್ಲಿ ತಮ್ಮ ನಿರ್ಧಾರ ಘೋಷಿಸುತ್ತಾರೆ. ಆದರೆ ಮೊದಲ ಹಂತದಲ್ಲಿ ಎಷ್ಟು ಅಭ್ಯರ್ಥಿಗಳನ್ನು ಘೋಷಿಸಬಹುದು ಎಂಬ ಯಾವುದೇ ಮಾಹಿತಿ ಇಲ್ಲ ಎಂದರು.
ಜೆಡಿಎಸ್‍ಗೆ ಎಷ್ಟು ಸೀಟು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲವೂ ಚರ್ಚೆ ಆಗಿದೆ. ಜೆಡಿಎಸ್ ವರಿಷ್ಠರ ಜೊತೆಗೂ ಚರ್ಚೆ ಮಾಡಿ ಎರಡ್ಮೂರು ದಿನಗಳಲ್ಲಿ ಎಲ್ಲವೂ ಇತಿಶ್ರೀ ಆಗಲಿದೆ ಎಂದರು.
ಹಾಲಿ ಸಂಸದರಿಗೆ ಟಿಕೆಟ್ ನೀಡುವ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಇವತ್ತು ಎಲ್ಲವೂ ಚರ್ಚೆ ಆಗಿದೆ. ಯಾರಿಗೆ ಕೊಡಲಿದ್ದಾರೆ, ಯಾರಿಗೆ ಇಲ್ಲ ಎಂಬುದು ಅಂತಿಮವಾಗಿ ನಿರ್ಧಾರ ಆಗಬೇಕಿದೆ. ಎರಡು ಹಂತಗಳಲ್ಲಿ ಬಿಜೆಪಿ ಪಟ್ಟಿ ಹೊರಬರಬಹುದು ಎಂದರು.