ನಾನು ಕೂಡ ಲೋಕ ಸಭೆ ಟಿಕೆಟ್, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಎಂದ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ
ದಾವಣಗೆರೆ: "ನಾನೂ ಸಹ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ: ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರಾಗಲು ಎಲ್ಲರೂ ಸಮರ್ಥರಿದ್ದಾರೆ, ಅವರಂತೆ ನಾನೂ ಸಹ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ, ಕೊಟ್ಟರೆ ಸಮರ್ಥವಾಗಿ ನಿಭಾಯಿಸುವೆ' ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಹೊನ್ನಾಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಲೋಕ ಸಭೆ ಚುನಾವಣೆಗೆ ಕೂಡ ನಾನು ಪ್ರಬಲ ಆಕಾಂಕ್ಷಿ ಯಾಗಿದ್ದು, ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನ ಜನತೆ ಸೇರಿದಂತೆ ಜಿಲ್ಲೆಯ ಅನೇಕ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನನಗೆ ಕರೆ ಮಾಡಿ ಲೋಕಸಭಾ ಅಭ್ಯರ್ಥಿಯಾಗಿ ನಾವು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಹೇಳುತ್ತಿದ್ದಾರೆ,ಈ ಬಗ್ಗೆ ಎಲ್ಲಾ ಸಾಧಕಭಾಧಕಗಳನ್ನು ಯೋಚಿಸಿ ನಿರ್ಧಾರ ಮಾಡಿದ್ದೇನೆ, ನಾನೂ ಕೂಡ ಎಂ.ಪಿ.ಚುನಾವಣೆಗೆ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದರು.
'ಸಂಸದ ಜಿ.ಎಂ.ಸಿದ್ದೇಶ್ ಅವರು ಸಹ ನನಗೆ ದೂರವಾಣಿ ಕರೆ ಮಾಡಿದ್ದರು, ಅವರಿಗೂ ಹೇಳಿದ್ದೇನೆ ,ಪಕ್ಷ ಕೊಟ್ಟರೆ ಮಾಡುತ್ತೇನೆ ಎಂದಷ್ಟೇ ಹೇಳಿದ್ದೇನೆ' ಎಂದು ಅವರು ತಿಳಿಸಿದರು.
''ಪ್ರಪ್ರಥಮವಾಗಿ ಬಿಜೆಪಿ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರನ್ನು ಸಿಎಂ.ಗಾದಿಯಿಂದ ಇಳಿಸಿದ್ದು ರಾಜ್ಯದ ಎಲ್ಲಾ ವರ್ಗದವರು ನಮ್ಮ ಪಕ್ಷದ ಬಗ್ಗೆ ಬೇಸರವಾಗಿದ್ದರು. ಒಬ್ಬ ಸ್ವಾಮೀಜಿಯವರು ಸಹ ಹೇಳಿದ್ದರು, ಬಿಎಸ್‌ವೈ ಅವರನ್ನು ಸಿಎಂ.ಕುರ್ಚಿಯಿಂದ ಇಳಿಸಿದ್ದಿರಿ, ಅವರ ಕಣ್ಣೀರಿನಲ್ಲಿ ಪಕ್ಷವೂ ಕೊಚ್ಚಿ ಹೋಗಲಿದೆ ಎಂದು ಅದರಂತೆ ನಮ್ಮ ಪಕ್ಷ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಬೇಕಾಯಿತು'' ಎಂದು ಅಸಮಾಧಾನ ವ್ಯಕ್ತಪಡಿಸಿದರು.