ಇಂದು ಮಧ್ಯರಾತ್ರಿಯಿಂದಲೇ ರಾಜ್ಯಾದ್ಯಂತ ಲಾರಿ ಮುಷ್ಕರ
ಸಾಂದರ್ಭಿಕ ಚಿತ್ರ
ಬೆಂಗಳೂರು : ಪೆಟ್ರೋಲ್, ಡೀಸೆಲ್ ದರ ಏರಿಕೆ, ಟೋಲ್ ಶುಲ್ಕ ಹೆಚ್ಚಳ ಖಂಡಿಸಿ ಇಂದು(ಎ.14) ಮಧ್ಯರಾತ್ರಿಯಿಂದಲೇ ರಾಜ್ಯಾದ್ಯಂತ ಲಾರಿ ಮಾಲಕರು ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಗೊಂಡಿದ್ದಾರೆ.
ಈ ಕುರಿತು ನಗರದಲ್ಲಿ ಮಾಹಿತಿ ನೀಡಿದ ರಾಜ್ಯ ಲಾರಿ ಮಾಲಕರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಖಪ್ಪ, ಪೆಟ್ರೋಲ್, ಡೀಸೆಲ್ ಹಾಗೂ ಟೋಲ್ ದರಗಳ ಪರಿಷ್ಕರಣೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಗೊಳ್ಳಲಾಗಿದ್ದು, ರಾಜ್ಯ ಸೇರಿದಂತೆ ಹೊರ ರಾಜ್ಯದ ಲಾರಿ ಮಾಲಕರು ಬೆಂಬಲಿಸಿದ್ದಾರೆ ಎಂದರು.
ಮುಷ್ಕರಕ್ಕೆ ಪೆಟ್ರೋಲ್ ಬಂಕ್ ಸಂಘಟನೆಗಳು ಬೆಂಬಲ ನೀಡಿವೆ. ನಮ್ಮ ಬೇಡಿಕೆ ಈಡೇರುವ ತನಕ ಮುಷ್ಕರ ನಿಲ್ಲಿಸುವುದಿಲ್ಲ. ಇಂದು(ಎ.14) ಮಧ್ಯರಾತ್ರಿಯಿಂದ ಸುಮಾರು ಆರು ಲಕ್ಷಕ್ಕೂ ಅಧಿಕ ಲಾರಿಗಳು ರಸ್ತೆಗಿಳಿಯುವುದಿಲ್ಲ. ಅಲ್ಲದೇ ಹೊರ ರಾಜ್ಯದಿಂದ ಬರುವ ಲಾರಿಗಳನ್ನು ತಡೆಯುತ್ತೇವೆ, ವಾಣಿಜ್ಯ ಸೇರಿದಂತೆ ಎಲ್ಲ ರೀತಿಯ ಸೇವೆಗಳು ಸ್ತಬ್ದವಾಗಲಿವೆ ಎಂದು ಜಿ.ಆರ್.ಷಣ್ಮುಖಪ್ಪ ತಿಳಿಸಿದರು.
ಗಡಿಗಳಲ್ಲಿ ಚೆಕ್‍ಪೋಸ್ಟ್ ತೆರವು, ಸರಕು ಸಾಗಾಣಿಕೆ ವಾಹನಗಳ ಓಡಾಟಕ್ಕೆ ಮನವಿ ಮಾಡಲಾಗುವುದು. ಚೆಕ್‍ಪೋಸ್ಟಗಳಲ್ಲಿ ಹೋರಾಟ ಮಾಡುತ್ತೇವೆ. ಏರ್‌ಪೋರ್ಟ್ ಟ್ಯಾಕ್ಸಿ, ಮರಳು ಲಾರಿ, ಗೂಡ್ಸ್ ವಾಹನ ಸಂಚಾರ ಬಂದ್ ಮಾಡಲಾಗುತ್ತದೆ ಎಂದು ಜಿ.ಆರ್.ಷಣ್ಮುಖಪ್ಪ ಹೇಳಿದರು.