ಎರಡನೇ ದಿನಕ್ಕೆ ಕಾಲಿಟ್ಟ ʼಮಹಾ ಧರಣಿ ಹಾಗೂ ರಾಜಭವನ್ ಚಲೋ’
ಬೆಂಗಳೂರು: ಮಹಿಳೆಯನ್ನು ಭೋಗದ ವಸ್ತುವೆಂದು ಮನುಸ್ಮೃತಿ ಹೇಳುತ್ತದೆ. ಈ ಮನುಸ್ಮೃತಿಯೇ ಮೋದಿ ಸರಕಾರದ ಜೀವಾಳವಾಗಿದೆ ಎಂದು ಮಹಿಳಾ ಸಂಘಟನೆಗಳ ಮುಖಂಡರಾದ ಮೀನಾಕ್ಷಿ ಬಾಳಿ ಹೇಳಿದ್ದಾರೆ.
ಸೋಮವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಸಂಯುಕ್ತ ಕಿಸಾನ್ ಮೋರ್ಚ್ ಮತ್ತು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಆಯೋಜಿಸಿದ್ದ ‘72 ಗಂಟೆಗಳು ದುಡಿಯುವ ಜನರ ಮಹಾ ಧರಣಿ ಹಾಗೂ ರಾಜಭವನ್ ಚಲೋ’ನ ಎರಡನೆಯ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೋದಿ ಸರಕಾರದಲ್ಲಿ ಅತೀ ಹೆಚ್ಚು ಸಂಕಷ್ಟಕ್ಕೆ ಒಳಗಾದವರು ಮಹಿಳೆಯರೇ ಆಗಿದ್ದಾರೆ. ಹತ್ರಾಸ್, ಉನ್ನಾವೋದಲ್ಲಿ ನಡೆದ ಅತ್ಯಾಚಾರ, ಬಿಲ್ಕೀಸ್ ಬಾನು ಮೇಲೆ ನಡೆದ ಅತ್ಯಾಚಾರ ಪ್ರಕರಣಗಳಲ್ಲಿ ಇಂದಿಗೂ ನ್ಯಾಯ ದೊರೆಯುತ್ತಿಲ್ಲ. ಆರೋಪಿಗಳನ್ನು ರಕ್ಷಿಸಲಾಗುತ್ತಿದ್ದು, ಮೋದಿ ಸರಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ ಎಂದರು.
ಹೆಣ್ಣು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂದು ಮನುವಾದ ಹೇಳುತ್ತದೆ. ಹೆಣ್ಣನ್ನು ಗಂಡು ರಕ್ಷಿಸುತ್ತಾನೆ ಎಂದು ಹೇಳುತ್ತದೆ. ಆದರೆ, ಮಹಿಳೆಗೆ ರಕ್ಷಣೆ ಎಲ್ಲಿದೆ. ಎಲ್ಲೆಡೆ, ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯಗಳು ನಡೆಯುತ್ತಿವೆ. ಕೇಂದ್ರ ಸರಕಾರ ಅತ್ಯಾಚಾರಿಗಳನ್ನು ರಕ್ಷಿಸುತ್ತಿದೆ. ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬ್ರಿಜ್ ಭೂಷಣ್ ಸಿಂಗ್‍ನನ್ನು ಸರಕಾರ ರಕ್ಷಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಹಿಳಾ ಮಿಸಲಾತಿ ಮಸೂದೆಯನ್ನು ಅಂಗೀಕರಿಸಿ, ಮಹಿಳೆಯರ ಮತ ಪಡೆಯಲು ಮೋದಿ ಸರಕಾರ ಹವಣಿಸುತ್ತಿದೆ. ಆದರೆ, ಅವರ ಕಾಯ್ದೆ ಆಟಕ್ಕುಂಟು-ಲೆಕ್ಕಕ್ಕಿಲ್ಲ ಎಂಬಂತಿದ್ದು, ಕಾಯ್ದೆಯನ್ನು ಜಾರಿಗೆ ತರಲು ಕನಿಷ್ಠ 10 ವರ್ಷ ಸತಾಯಿಸುತ್ತಾರೆ. ಮಹಿಳೆಯರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ತಮ್ಮ ಆಟ ದೇಶದ ಮಹಿಳೆಯರ ಮುಂದೆ ನಡೆಯುವುದಿಲ್ಲ ಎಂಬುದನ್ನು ಕೇಂದ್ರ ಸರಕಾರ ಅರಿತುಕೊಳ್ಳಬೇಕು ಎಂದು ಮೀನಾಕ್ಷಿ ಬಾಳಿ ಹೇಳಿದರು.
ಹಿರಿಯ ಹೋರಾಟಗಾರ ಎಸ್.ಆರ್ ಹಿರೇಮಠ್ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳಲ್ಲಿ ಸರಕಾರಗಳು ಜನಪರವಾದ ನೀತಿಗಳನ್ನು ತರಬೇಕು ಎಂದು ಹೇಳಿದ್ದಾರೆ. ಆದರೆ, ಅವರ ಆಶಯಕ್ಕೆ ವಿರೋಧವಾಗಿ ನೀತಿಗಳು ಜಾರಿಯಾಗುತ್ತಿವೆ. ಅದಾನಿ, ಅಂಬಾನಿಗಳಂತಹ ಬಂಡವಾಳಿಗರ ಸಂಪತ್ತು ಹೆಚ್ಚುತ್ತಿವೆ. ಸುಳ್ಳು ಭರವಸೆಗಳನ್ನು ನೀಡಿ, ಜನರನ್ನು ಸರಕಾರಗಳು ಯಾಮಾರಿಸುತ್ತಿವೆ ಎಂದರು.
ಈಗ ಎರಡನೇ ಸ್ವಾತಂತ್ರ್ಯ ಹೋರಾಟವನ್ನು ನಾವೆಲ್ಲರೂ ಮಾಡಬೇಕಾಗಿದೆ. ಕೋಮುವಾದಿ, ಬಂಡವಾಳಶಾಹಿ ಪರವಾದ ಬಿಜೆಪಿ ಸರಕಾರವನ್ನು ಸೋಲಿಸಬೇಕಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಿದ್ದೇವೆ. ಆದರೆ, ಅವರು ಮುಂದೆ ಮತ್ತೆ ಮುನ್ನೆಲೆಗೆ ಬರುತ್ತಾರೆ. ಹೀಗಾಗಿ, ಸುದೀರ್ಘ ಹೋರಾಟಗಳು ಕೋಮುವಾದಿ, ಬಂಡವಾಳಶಾಹಿಗಳ ವಿರುದ್ಧ ನಡೆಯಬೇಕಿದೆ. ರಾಷ್ಟ್ರವನ್ನು ಕಟ್ಟುವಲ್ಲಿ ನಾವೆಲ್ಲರೂ ದುಡಿಯಬೇಕಿದೆ ಎಂದು ಅವರು ಕರೆ ನೀಡಿದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ, ಅಂಬಾನಿ, ಅದಾನಿ ಮನೆಯಲ್ಲಿ ಜಗಳ ಆದರೆ, ಬಿಡಿಸಲು ಪ್ರಧಾನಿ ಮೋದಿ ಹೋಗುತ್ತಾರೆ. ಅದರೆ, ಅವರಿಗೆ ರೈತರ, ಕಾರ್ಮಿಕರ, ದಲಿತರ, ಯುವಜನರ ಸಂಕಷ್ಟಗಳನ್ನು ಕೇಳಲು ಸಮಯವಿಲ್ಲ. ಅವರು ಉಳ್ಳವರಿಗಾಗಿ ನೀತಿಗಳನ್ನು ರೂಪಿಸುತ್ತಿದ್ದಾರೆ ಎಂದು ಖಂಡಿಸಿದರು.
ಕೃಷಿಯಲ್ಲಿ ಜೀವನವಿಲ್ಲ ಎಂದು ನಾವೆಲ್ಲ ಭಾವಿಸಿದ್ದೇವೆ. ನಮ್ಮ ಮಕ್ಕಳು ಚೆನ್ನಾಗಿ ಓದಬೇಕು. ಒಳ್ಳೆಯ ಜೀವನ ನಡೆಸಬೇಕೆಂದು ನಾವೆಲ್ಲ ಕನಸು ಕಾಣುತ್ತೇವೆ. ಆದರೆ, ನಮ್ಮ ಕೃಷಿ ಭೂಮಿಯನ್ನೂ ಕಸಿದುಕೊಳ್ಳಲಾಗುತ್ತಿದೆ. ದೇವನಹಳ್ಳಿ ಬಳಿಯ ಚನ್ನರಾಯಪಟ್ಟಣದಲ್ಲಿ ಕೆಐಎಡಿಬಿ ರೈತರ ಭೂಮಿಯನ್ನು ಕೈಗಾರಿಕೆಗಾಗಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಅಲ್ಲಿನ ರೈತರು ಸುಮಾರು 500ಕ್ಕೂ ಹೆಚ್ಚು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಅವರ ಮಾತನ್ನು ಸರಕಾರಗಳು ಕೇಳಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಗ್ರಾಮೀಣ ಪ್ರದೇಶದಲ್ಲಿರುವ ಕೃಷಿ ಕೂಲಿ ಕಾರ್ಮಿಕರಿಗೆ ಸರಿಯಾದ ಕೂಲಿ ದೊರೆಯಬೇಕು. ಕೂಲಿ ನೀಡುವ ಸಾಮಥ್ರ್ಯ ರೈತರಿಗೆ ಬರಬೇಕು. ಜನರು ಕೊಂಡುಕೊಳ್ಳುವ ಶಕ್ತಿ ಹೆಚ್ಚಾಗಬೇಕು. ಅದರೆ, ಗ್ರಾಮೀಣ ಭಾಗದಲ್ಲಿ ಕೊಳ್ಳುವ ಶಕ್ತಿ ಶೇ.75ರಷ್ಟು ಕುಸಿದಿದೆ. ಬಂಡವಾಳಿಗರ ಜೊತೆ ಸೇರಿ, ದೇಶವನ್ನು ಮಾರಾಟ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ಇಂತಹ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಅವರು ಹೇಳಿದರು.
ಆಳುವ ಸರಕಾರಗಳು ಬಲಾಡ್ಯರ ದಲ್ಲಾಳಿಗಳಾಗಿವೆ: ನೂರ್ ಶ್ರೀಧರ್
ನಮ್ಮೆಲ್ಲ ಸಮಸ್ಯೆಗಳಿಗೂ ಮೂಲ ಕಾರಣ ನಮ್ಮನ್ನಾಳುತ್ತಿರುವ ಸರಕಾರಗಳೇ ಆಗಿವೆ. ಜನರನ್ನು ದೋಚುವ ಬಲಾಢ್ಯರಿಗೆ ಸರಕಾರಗಳು ದಳ್ಳಾಳಿಗಳಂತೆ ಕೆಲಸ ಮಾಡುತ್ತಿವೆ ಎಂದು ಕರ್ನಾಟಕ ಜನಶಕ್ತಿಯ ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ಟೀಕಿಸಿದ್ದಾರೆ.
ಸರಕಾರಗಳು ಬಲಾಢ್ಯರನ್ನು ನಿಯಂತ್ರಿಸಿ ಜನರನ್ನು ರಕ್ಷಿಸಬೇಕು. ಆದರೆ, ಆ ಕೆಲಸವನ್ನು ಯಾವ ಸರಕಾರಗಳೂ ಮಾಡುತ್ತಿಲ್ಲ. ಬದಲಾಗಿ, ಬಲಾಢ್ಯರಿಂದ ಹಣ ಪಡೆದು, ಜನರನ್ನು ಶೋಷಿಸುತ್ತಿವೆ. ಕೇಂದ್ರ ಸರಕಾರ ಜನ ವಿರೋಧಿ ನೀತಿಗಳ ಮೂಲಕ ಜನರನ್ನು ಶೋಷಿಸುತ್ತಿದೆ. ಬಿಜೆಪಿಯನ್ನು ಮಣಿಸಿ ಜನರು ಅಧಿಕಾರಕ್ಕೆ ತಂದ ರಾಜ್ಯ ಕಾಂಗ್ರೆಸ್ ಸರಕಾರ ಜನರ ಮಾತಿಗೆ ಕಿವಿಗೊಡದೆ ಮೊಂಡುತನ ಮೆರೆಯುತ್ತಿದೆ ಎಂದು ಖಂಡಿಸಿದರು.
ಕಾಂಗ್ರೆಸ್ ಭ್ರಷ್ಟಾಚಾರ ಮಾಡುತ್ತಿದೆ ಎಂದು ದೇಶದ ಜನರು ಮೋದಿಗೆ ಅಧಿಕಾರ ಕೊಟ್ಟರು. ಮೋದಿ ಸರಕಾರ ಅಧಿಕಾರಕ್ಕೆ ಬಂದರೆ, ಯುವಜನರಿಗೆ ಉದ್ಯೋಗ ಸಿಗುತ್ತದೆ. ಕೃಷಿಗೆ ಬೆಂಬಲ ಬೆಲೆ ಸಿಗುತ್ತದೆ. ಜನರಿಗೆ ಉತ್ತಮ ಜೀವನ ಸಿಗುತ್ತದೆ ಎಂದು ನಾವು ಅವರಿಗೆ ಮತ ಹಾಕಿದೆವು. ಆದರೆ, ಜನರು ಮತ್ತಷ್ಟು ಬಡವರಾದರು. ಅಂಬಾನಿ-ಅದಾನಿಗಳು ಮತ್ತಷ್ಟು ಶ್ರೀಮಂತರಾದರು. ಕೊರೊನಾ ಸಂದರ್ಭದಲ್ಲೂ ಜನರನ್ನು ಶೋಷಿಸಲಾಯಿತು ಎಂದು ಅವರು ಹೇಳಿದರು.
ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ನಾಯಕ ವಿಜು ಕೃಷ್ಣನ್ ಮಾತನಾಡಿ, 2014ರಲ್ಲಿ ಚುನಾವಣೆ ಬಂದಾಗ ಬೇಕಾದಷ್ಟು ಆಕರ್ಷಕ ಭರವಸೆಗಳನ್ನು ನೀಡಿ ಬಿಜೆಪಿ ಅಧಿಕಾರಕ್ಕೆ ಬಂದಿತು. ರೈತ ಮತ್ತು ದುಡಿವ ಜನರಿಗೆ ಅಚ್ಛೇ ದಿನ್(ಒಳ್ಳೆಯ ದಿನ) ಬರುತ್ತದೆ ಎಂದು ಹೇಳಿತ್ತು. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ಹೇಳಿತ್ತು. ನರೇಗಾದಲ್ಲಿ 200 ದಿನ ಕೆಲಸ ಕೊಡುತ್ತೇವೆ, ರೈತರಿಗೆ ಬೀಜ, ರಸಗೊಬ್ಬರ ಕಡಿಮೆ ಬೆಲೆ ಕೊಡುತ್ತೇವೆ ಎಂಬುವುದು ಸೇರಿ ಹಲವಾರು ಭರವಸೆ ನೀಡಿತ್ತು. ಇಂದು ಈ ಎಲ್ಲದಕ್ಕೆ ತದ್ವಿರುದ್ಧ ಸ್ಥಿತಿಯಿದೆ ಎಂದರು.
ರೈತ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ, ಸ್ವಾತಂತ್ಯ್ರ ಪಡೆಯಲು ನಾವು 2 ಶತಮಾನಗಳ ಕಾಲ ಹೋರಾಟ ಮಾಡಿದ್ದೇವೆ. ಈ ದೇಶಕ್ಕಾಗಿ ಜನರು ತಮ್ಮ ಆಯುಷ್ಯವನ್ನೇ ಮುಡಿಪಿಟ್ಟಿದ್ದಾರೆ. ನಾವು ಈಗ ಸಂವಿಧಾನ ಉಳಿಸಿಕೊಳ್ಳಬೇಕಾದ ಪರಿಸ್ಥಿತಿಯಿದೆ. 2024ರ ಚುನಾವಣೆಯಲ್ಲಿ ಭಾರತ ದೇಶದ ಜನರಿಗೆ ದೊಡ್ಡ ಮಹತ್ವವಾದ ಚುನಾವಣೆ. ರಾಜಕೀಯ ಪಕ್ಷಗಳಿಂದ ಬದಲಾವಣೆ ಸಾಧ್ಯವಿಲ್ಲ. ಹೀಗಾಗಿ ಜನಚಳವಳಿಗಳು ಬದಲಾವಣೆ ತರಬೇಕು. 2024ರ ಚುನಾವಣೆಯಲ್ಲಿ ಜನಚಳವಳಿಗಳು ನಿರ್ಣಾಯಕ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು.
ಎಲ್ಲ ಸಂಘಟನೆಗಳ ಮುಖಂಡರು ಭಾಷಣ ಮಾಡಿದ ನಂತರ ಕರಾಳ ಕಾಯ್ದೆಗಳನ್ನು ಪ್ರತಿಭಟನೆಯ ಸೂಚಕವಾಗಿ ಬೆಂಕಿ ಹಚ್ಚಿ ಸುಡಲಾಯಿತು. ಕೇಂದ್ರ ಸರಕಾರದ ಪ್ರತಿನಿಧಿಯಾಗಿ ರಾಜ್ಯಪಾಲರಿಗೆ ಮತ್ತು ರಾಜ್ಯ ಸರಕಾರದ ಪ್ರತಿನಿಧಿಯಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಲಾಯಿತು. ಸಂಜೆ 7 ರಿಂದ 10 ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ರೈತಾಂದೋಲನದ ಕುರಿತಾಗಿ ನಿರ್ಮಿಸಿರುವ ‘ಕಿಸಾನ್ ಸಂಘರ್ಷ’ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯ್ಕ್, ಲೇಖಕಿ ಕೆ.ಶರೀಫಾ, ಸಿಪಿಐ ಮುಖಂಡರಾದ ಅಮ್ಜದ್ ಅಲಿ, ಪಿ.ವಿ.ಲೋಕೇಶ್, ಟಿ.ಯಶವಂತ, ಎಚ್.ವಿ. ದಿವಾಕರ್ ಇನ್ನಿತರರು ಮತ್ತಿತರರು ಉಪಸ್ಥಿತರಿದ್ದರು.