ಮಂಡ್ಯ | ಜೆಡಿಎಸ್ ಮುಖಂಡನ ಕೊಲೆ ಯತ್ನ ಪ್ರಕರಣ: ಕೆಲವೇ ತಾಸುಗಳಲ್ಲಿ 7 ಮಂದಿ ಆರೋಪಿಗಳ ಬಂಧನ
ಮಂಡ್ಯ, ಆ.12: ಮದ್ದೂರು ಪಟ್ಟಣದ ಶಿಂಷಾನದಿ ದಡದಲ್ಲಿರುವ ಹೊಳೆ ಆಂಜನೇಯಸ್ವಾಮಿ ದೇವಾಲಯದ ಬಳಿ ಶನಿವಾರ ಬೆಳಗ್ಗೆ ಹಾಡಹಗಲೇ ಜೆಡಿಎಸ್ ಮುಖಂಡನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆಗೆ ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಿಸಿ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯಲ್ಲಿ ಮದ್ದೂರು ಪಟ್ಟಣದ ಜೆಡಿಎಸ್ ಮುಖಂಡ ಅಪ್ಪು ಪಿ ಗೌಡ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಘಟನೆ ನಡೆದ ಕೆಲವೇ ತಾಸುಗಳಲ್ಲಿ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ದೇವಾಲಯಕ್ಕೆ ಪೂಜೆ ಸಲ್ಲಿಸಲು ತೆರಳಿದ್ದ ಅಪ್ಪು ಪಿ ಗೌಡ ಅವರ ಮೇಲೆ ಆರು ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಿಢೀರ್ ದಾಳಿ ನಡೆಸಿದ್ದು, ಸ್ಥಳದಲ್ಲಿದ್ದ ಪೊಲೀಸ್ ಪೇದೆ ಕುಮಾರಸ್ವಾಮಿ ಮತ್ತು ಭಕ್ತರು ಕಲ್ಲುತೂರಿ ದುಷ್ಕರ್ಮಿಗಳನ್ನು ಹಿಮ್ಮೆಟ್ಟಿಸಿದ್ದಾರೆ.
ದಾಳಿಯಿಂದ ಅಪ್ಪು ಪಿ ಗೌಡ ಅವರ ಹೊಟ್ಟೆ, ಕತ್ತು, ಕೈ ಮತ್ತು ಬೆನ್ನಿಗೆ ಗಾಯವಾಗಿದ್ದು, ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಡ್ಯದ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸ್ಥಳದಿಂದ ಟಾಟಾ ಸುಮೋದಲ್ಲಿ ಪರಾರಿಯಾಗುತ್ತಿದ್ದ ಆರು ಮಂದಿ ದುಷ್ಕರ್ಮಿಗಳನ್ನು ಬೆನ್ನಟ್ಟಿದ ಪೊಲೀಸರು ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಬುಯ್ಯನದೊಡ್ಡಿ ಗ್ರಾಮದ ಬಳಿ ಬಂಧಿಸಿದ್ದಾರೆ.
ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಅಪ್ಪುಗೌಡರ ಕೊಲೆಗೆ ಸುಫಾರಿ ಕೊಟ್ಟಿದ್ದನೆನ್ನಲಾದ ಆತನ ಉದ್ಯಮದ ಪಾಲುದಾರ ಕೋಣಸಾಲೆ ಗ್ರಾಮದ ಜೆಡಿಎಸ್ ಮುಖಂಡ ಮಧು ಎಂಬಾತನನ್ನೂ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆಂದು ತಿಳಿದು ಬಂದಿದೆ.
ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
“ಹಲ್ಲೆ ನಡೆಸಿದ 6 ಆರೋಪಿಗಳನ್ನು ನಮ್ಮ ಪೊಲೀಸರು ಬೆನ್ನಟ್ಟಿ ಸಾರ್ವಜನಿಕರ ಸಹಕಾರದಿಂದ ಬಂಧಿಸಿದ್ದಾರೆ. ಇವರ ಜತೆಗೆ ಕೊಲೆಗೆ ಸಂಚು ರೂಪಿಸಿದ್ದನೆನ್ನಲಾದ ವ್ಯಕ್ತಿಯನ್ನೂ ಬಂಧಿಸಲಾಗಿದೆ. ಅಪ್ಪುಗೌಡ ಮತ್ತು ಕೊಲೆಗೆ ಸಂಚು ರೂಪಿಸಿದ್ದ ಬ್ಯುಸಿನೆಸ್ ಪಾರ್ಟನರ್ ಆಗಿದ್ದು, ಅವರ ನಡುವೆ ವೈಮನಸ್ಸು ಉಂಟಾಗಿತ್ತು. ಹಾಗಾಗಿ ಅಪ್ಪುಗೌಡರ ಕೊಲೆಗೆ ಸಂಚುರೂಪಿಸಿ ಬೆಂಗಳೂರು ಮತ್ತು ಇತರೆಡೆಯಿಂದ ವ್ಯಕ್ತಿಗಳನ್ನು ಕರೆತಂದಿದ್ದ ಎಂದು ಬಂಧಿತರಿಂದ ತಿಳಿದು ಬಂದಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.”
-ಎನ್.ಯತೀಶ್, ಮಂಡ್ಯ ಎಸ್ಪಿ.