ಮಂಡ್ಯ: ತಮಿಳುನಾಡಿಗೆ ನೀರು ಬಿಡುಗಡೆ ಖಂಡಿಸಿ ರಸ್ತೆ ತಡೆ
ಮಂಡ್ಯ: ಕೃಷ್ಣರಾಜಸಾಗರ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರೈತರು ನಗರದಲ್ಲಿ ಶುಕ್ರವಾರ ರಸ್ತೆ ತಡೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಆಶ್ರಯದಲ್ಲಿ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ನಡೆದ ರೈತರ ದಿಢೀರ್ ಪ್ರತಿಭಟನೆಯಿಂದ ವಾಹನ ಸಂಚಾರದಲ್ಲಿ ವ್ಯತ್ಯಯವುಂಟಾಯಿತು.
ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದ ರೈತರು, ಸಂಕಷ್ಟಕಾಲದಲ್ಲಿ ಮಧ್ಯಪ್ರವೇಶಿಸಬೇಕಾದ ಕೇಂದ್ರ ಸರಕಾರ ಕರ್ನಾಟಕದ ವಿಚಾರದಲ್ಲಿ ನಿರಂತರವಾಗಿ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸುವವರೆಗೂ ಹೋರಾಟ ಮುಂದುವರಿಸುವುದಾಗಿ ರೈತರು ಎಚ್ಚರಿಸಿದರು.
ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಮತ್ತಷ್ಟು ದಿನ ಮುಂದೂಡುವುದು. ತಮಿಳುನಾಡಿಗೆ ಹೆಚ್ಚಿನ ನೀರು ಹರಿಯಲಿ ಎಂಬ ಹುನ್ನಾರವಾಗಿದೆ. ರಾಜ್ಯದ ಜಲಾಶಯಗಳ ವಾಸ್ತವ ಪರಿಸ್ಥಿತಿ ಅರಿಯಲು ನೀರಾವರಿ ತಜ್ಞರ ತಂಡ ಕಳುಹಿಸಿಕೊಡಬೇಕು. ಜಲಾಶಯದಲ್ಲಿರುವ ನೀರಿನ ಲಭ್ಯತೆ ಬಗ್ಗೆ ತಿಳಿದುಕೊಳ್ಳಲಿ. ಅದನ್ನು ಬಿಟ್ಟು ನೀರು ಹರಿಸಲು ಪದೇ ಪದೇ ಆದೇಶ ಮಾಡುವುದು ಮಲತಾಯಿ ಧೋರಣೆ ಅಲ್ಲವೇ ಎಂದು ಪ್ರಶ್ನಿಸಿದ ಪ್ರತಿಭಟನಾ ನಿರತ ರೈತರು, ರಾಜ್ಯ ಸರಕಾರ ಯಾವುದಕ್ಕೂ ಮಣಿಯದೆ ರೈತರ ಹಿತ ಕಾಪಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಕೆ ಆರ್ ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ನೂರು ಅಡಿಗೆ ಕುಸಿದಿದೆ. ಇಲ್ಲಿನ ಬೆಳೆದು ನಿಂತಿರುವ ಬೆಳೆಗೆ ನೀರು ಕೊಡುತ್ತಿಲ್ಲ. ಹೊಸ ಬೆಳೆ ನಾಟಿ ಮಾಡಲು ಸಾಧ್ಯವಾಗಿಲ್ಲ. ಇದೇ ರೀತಿ ನೀರು ಹರಿಸುತ್ತಿದ್ದರೆ ಕುಡಿಯಲು ನೀರು ಸಹ ಇಲ್ಲದಂತಾಗುತ್ತದೆ. ಈ ತಕ್ಷಣ ನೀರು ನಿಲ್ಲಿಸುವಂತೆ ಒತ್ತಾಯಿಸಿದರು.
ರೈತಸಂಘದ ಮುಖಂಡರಾದ ಮರಿಚೆನ್ನಪ್ಪ, ವಿಜಯ್ ಕುಮಾರ್, ಬಿದರಕೋಟೆ ರಮೇಶ್, ಇಂಡುವಾಳು ಸಿದ್ದೇಗೌಡ, ಅಣ್ಣೂರು ಮಹೇಂದ್ರ, ರಾಮಕೃಷ್ಣೇಗೌಡ, ಜವರೇಗೌಡ ನೇತೃತ್ವ ವಹಿಸಿದ್ದರು.