ಮಂಡ್ಯ: 72ನೇ ದಿನಕ್ಕೆ ಕಾಲಿಟ್ಟ ಕಾವೇರಿ ಹೋರಾಟ
ಮಂಡ್ಯ, ನ.15: ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿರುವುದನ್ನು ವಿರೋಧಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಧರಣಿ ಬುಧವಾರ 72ನೇ ದಿನಕ್ಕೆ ಕಾಲಿಟ್ಟಿದೆ.
ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಧರಣಿ ನಡೆಸುತ್ತಿದ್ದು, ಕಾವೇರಿ ಜಲ ನಿಯಂತ್ರಣ ಸಮಿತಿ, ನಿರ್ವಹಣಾ ಪ್ರಾಧಿಕಾರ, ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರಕಾರ ಕಾವೇರಿ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಮನವರಿಕಗೆ ಮಾಡಲು ವಿಫಲವಾಗಿದೆ. ಹಾಗೆಯೇ ಒಕ್ಕೂಟ ವ್ಯವಸ್ಥೆಯಲ್ಲಿ ಮಧ್ಯಪ್ರವೇಶಿಸಬೇಕಾದ ಕೇಂದ್ರ ಸರಕಾರ ಮಲತಾಯಿ ಧೋರಣೆ ಮುಂದುವರಿಸಿದೆ ಎಂದು ಅವರು ಕಿಡಿಕಾರಿದರು.
ಮುಖಂಡ ನಾರಾಯಣ್ ಮಾತನಾಡಿ, ಕಾವೇರಿ ನದಿ ನೀರಿನ ವಿಚಾರದಲ್ಲಿ ನಿರಂತರ ಅನ್ಯಾಯಕೊಡಗಾಗಿರುವ ಕರ್ನಾಟಕಕ್ಕೆ 19ರಂದು ನಡೆಯುವ ಪ್ರಾಧಿಕಾರದ ಸಭೆಯಲ್ಲಿ ನ್ಯಾಯ ದೊರಕಲಿದೆ ಎಂಬ ಆಶಾ ಭಾವನೆ ಇದೆ. ಇಲ್ಲವಾದರೆ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದರು.
ಕೆ.ಬೋರಯ್ಯ ಮಾತನಾಡಿ, ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಕಷ್ಟಕಾಲದಲ್ಲಿಯೂ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಜನಜಾನುವಾರುಗಳಿಗೆ ಕುಡಿಯಲು ನೀರು ಉಳಿಯಲಿ ಎಂದು ಹೋರಾಟವನ್ನು ಮುಂದುವರಿಸಿದ್ದೇವೆ ಎಂದು ಹೇಳಿದರು.
ಸುನಂದಾ ಜಯರಾಂ, ಮಲ್ಲನಾಯಕನಕಟ್ಟೆ ಬೋರೇಗೌಡ, ರೈತ ಸಂಘದ ಇಂಡುವಾಳು ಚಂದ್ರಶೇಖರ್. ಮುದ್ದೇಗೌಡ, ಕೃಷ್ಣಪ್ರಕಾಶ್, ಕನ್ನಡ ಸೇನೆ ಮಂಜುನಾಥ್, ದಸಂಸ ಎಂ.ವಿ.ಕೃಷ್ಣ, ನಿವೃತ್ತ ಇಂಜಿನಿಯರಿಂಗ್ ಸಂಘದ ದೇವರಾಜು, ಫಯಾಝ್, ಇತರರು ಉಪಸ್ಥಿತರಿದ್ದರು.
ನ.16ರಂದು ಬೆಂಗಳೂರಿನಲ್ಲಿ ಸಭೆ
ಕಾವೇರಿ ಹಿತರಕ್ಷಣಾ ಸಮನ್ವಯ ಸಮಿತಿ ವತಿಯಿಂದ ಕಾವೇರಿ ನದಿ ನೀರಿನ ವಿಚಾರವಾಗಿ ಮುಂದಿನ ಹೋರಾಟದ ರೂಪು ರೇಷೆಗಳ ಬಗ್ಗೆ ಚರ್ಚಿಸಲು ನ.16ರಂದು ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದೆ.
ನ್ಯಾಯವಾದಿಗಳು, ನೀರಾವರಿ ತಜ್ಞರು, ಕನ್ನಡಪರ ಸಂಘಟನೆಗಳ ಮುಖಂಡರ ಸಲಹೆ ಪಡೆದು ಮುಂದಿನ ಹೋರಾಟ ರೂಪಿಸುವ ಸಂಬಂಧ ಈ ಸಭೆ ಕರೆಯಲಾಗಿದೆ ಎಂದು ಸಮಿತಿಯ ಅಂದಾನಿ ಸೋಮನಹಳ್ಳಿ, ಹಾಡ್ಯ ರಮೇಶರಾಜು, ಬೇಕ್ರಿ ರಮೇಶ್ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.