ಕೆ.ಆರ್.ಪೇಟೆ | ಕೆರೆ ಒತ್ತುವರಿ ತೆರವು ವೇಳೆ ಗ್ರಾಮಸ್ಥರ ನಡುವೆ ಘರ್ಷಣೆ: ಆರು ಮಂದಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

Update: 2023-09-01 16:01 GMT

ಮಂಡ್ಯ, ಸೆ.1: ಕೆರೆ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಕೆ.ಆರ್.ಪೇಟೆ ತಾಲೂಕಿನ ಕಸಬಾ ಹೋಬಳಿಯ ವಡ್ಡರಹಳ್ಳಿ ಹಾಗೂ ಹೆಗ್ಗಡಹಳ್ಳಿ ಗ್ರಾಮಸ್ಥರ ನಡುವೆ ಮಾರಾಮಾರಿ ನಡೆದು ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.

ತೆಂಗಿನ ಗುದಮೊಟ್ಟೆ ಹಾಗೂ ದೊಣ್ಣೆಗಳಿಂದ ಪರಸ್ಪರ ಬಡಿದಾಡಿಕೊಳ್ಳುತ್ತಿದ್ದ ಗ್ರಾಮಸ್ಥರನ್ನು ಸಂತೈಸಿ ಪರಿಸ್ಥಿತಿ ತಿಳಿಗೊಳಿಸಲು ಮಧ್ಯಪ್ರವೇಶ ಮಾಡಿದ ಎರಡು ಗ್ರಾಮಗಳ 6 ಮಂದಿ ಹಿರಿಯರು ಗಂಭೀರ ಗಾಯಗೊಂಡಿದ್ದು, ಕೆ.ಆರ್.ಪೇಟೆ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಕಿಕ್ಕೇರಿ ಪೋಲಿಸ್ ಠಾಣೆಯ ಇನ್ಸ್‍ಪೆಕ್ಟರ್ ರೇವತಿ, ಗ್ರಾಮಾಂತರ ಪೋಲಿಸ್ ಠಾಣೆಯ ಇನ್ಸ್‍ಪೆಕ್ಟರ್ ಜಗದೀಶ್ ಅವರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಎರಡು ಗ್ರಾಮಗಳಲ್ಲಿಯೂ ಮುಂಜಾಗ್ರತ ಕ್ರಮವಾಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ.

 

ಘಟನೆ ಹಿನ್ನೆಲೆ: ವಡ್ಡರಹಳ್ಳಿ ಗ್ರಾಮದ ಸರಹದ್ದಿಗೆ ಸೇರಿದ 23 ಎಕರೆ 30 ಗುಂಟೆ ವಿಸ್ತೀರ್ಣದ ಕೆರೆಯ ಹೂಳು ತೆಗೆದು ಅಭಿವೃದ್ಧಿಪಡಿಸುವ ಕಾಮಗಾರಿಯು 75 ಲಕ್ಷ ರೂ. ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯ ವಿಶೇಷ ಅನುದಾನದಲ್ಲಿ ನಡೆಯುತ್ತಿದೆ. ಕೆರೆಯ ಒತ್ತುವರಿದಾರರ (ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಕಾರ್ಯಕರ್ತರು) ನಡುವೆ ಈ ವಿಚಾರದಲ್ಲಿ ಆರೋಪ ಪ್ರತ್ಯಾಪರೋಪ ಕೇಳಿಬಂದಿದ್ದವು ಎನ್ನಲಾಗಿದೆ.

ಶುಕ್ರವಾರ ಮಧ್ಯಾಹ್ನ ವಡ್ಡರಹಳ್ಳಿ ಗ್ರಾಮದ ಕೆರೆಯ ಅಭಿವೃದ್ಧಿ ಕಾಮಗಾರಿಯ ವೀಕ್ಷಣೆ ನಡೆಸಿದ ತಹಶೀಲ್ದಾರ್ ನಿಸರ್ಗಪ್ರಿಯ ಅವರು, ಕೆರೆಯ ಒತ್ತುವರಿದಾರರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಯಾವುದೇ ಮುಲಾಜಿಲ್ಲದೇ ತೆರವು ಕಾರ್ಯಾಚರಣೆ ನಡೆಸಲಾಗುವುದು. ಇದರಲ್ಲಿ ಯಾವುದೇ ಪ್ರಭಾವಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿ ಕೆರೆಯ ಅಭಿವೃದ್ಧಿ ಕಾಮಗಾರಿ ನಡೆಸುವಂತೆ ಸೂಚಿಸಿ ತುರ್ತು ಕಾರ್ಯನಿಮಿತ್ತ ಬೇರೆಡೆಗೆ ತೆರಳಿದ್ದಾರೆ.

ನಂತರ, ಕೆರೆಯ ಅಂಗಳದ ಅಕ್ಕಪಕ್ಕದ ಜಮೀನುಗಳಲ್ಲಿ ನೆರೆದಿದ್ದ ಎರಡೂ ಗ್ರಾಮಗಳ ಗ್ರಾಮಸ್ಥರು ಸೇರಿದಂತೆ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಆರೋಪ, ಪ್ರತ್ಯಾರೋಪ ಮಾಡಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಜಗಳವನ್ನು ಬಿಡಿಸಿ ಶಾಂತಿ ಕಾಪಾಡಲು ಹೋದ ಎರಡೂ ಗ್ರಾಮಗಳ ಹಿರಿಯರಿಗೂ ತೆಂಗಿನ ಮರದ ಗುದಮೊಟ್ಟೆಯ ಏಟುಗಳು ಬಲವಾಗಿಯೇ ಬಿದ್ದಿದ್ದು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News