ಮಂಡ್ಯ | ರೈತನಿಗೆ ಪರಿಹಾರ ಮೊತ್ತ ನೀಡಲು ವಿಫಲ: ಉಪವಿಭಾಗಾಧಿಕಾರಿಗಳ ಕಚೇರಿ ಚರಾಸ್ತಿ ಜಪ್ತಿ

Update: 2023-08-09 14:24 GMT

ಮಂಡ್ಯ, ಆ.9: ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕಾಗಿ ರೈತರಿಂದ ವಶಪಡಿಸಿಕೊಂಡ ಜಮೀನಿಗೆ ಪರಿಹಾರ ಒದಗಿಸಲು ಉಪವಿಭಾಗಾಧಿಕಾರಿಗಳು ವಿಫಲರಾದ ಹಿನ್ನೆಲೆಯಲ್ಲಿ ಪಾಂಡವಪುರ ಜೆಎಂಎಫ್‍ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರ ಆದೇಶದಂತೆ ಕೋರ್ಟ್ ಅಮೀನರು ರೈತರ ಸಹಕಾರದೊಂದಿಗೆ ಪಾಂಡವಪುರ ಉಪವಿಭಾಗಾಧಿಕಾರಿ ಕಚೇರಿ ಚರಾಸ್ತಿಗಳನ್ನು ಮಂಗಳವಾರ ಜಪ್ತಿ ಮಾಡಿದರು.

2006ರಲ್ಲಿ ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣ ಘಟಕ ನಿಮಾಣಕ್ಕಾಗಿ ಪಟ್ಟಣದ ಹೊರವಲಯದಲ್ಲಿ ಒಳಚರಂಡಿ ಮಂಡಳಿ ರೈತ ಸತ್ಯನಾರಾಯಣ ಅವರಿಗೆ ಸೇರಿದ 30 ಗುಂಟೆ ಜಮೀನನ್ನು ಸ್ವಾಧೀನಪಡಿಸಿಕೊಂಡು ಪರಿಹಾರ ನೀಡಲು ಮುಂದಾಗಿತ್ತು. ಪರಿಹಾರದ ಮೊತ್ತ ಮಾರುಕಟ್ಟೆ ದರಕ್ಕಿಂತ ತೀರಾ ಕಡಿಮೆ ಎನ್ನುವ ಕಾರಣಕ್ಕಾಗಿ ರೈತ ಪರಿಹಾರವನ್ನು ತಿರಸ್ಕರಿಸಿ ಹೆಚ್ಚಿನ ಪರಿಹಾರಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಏರಿದ್ದರು.

ರೈತರ ಮನವಿ ಪುರಸ್ಕರಿಸಿದ ನ್ಯಾಯಾಲಯ ಚದರ ಅಡಿಗೆ 375 ರೂ.ನಂತೆ ಪರಿಹಾರ ನೀಡುವಂತೆ 2021ರಲ್ಲಿ ಆದೇಶ ನೀಡಿತ್ತು. ನ್ಯಾಯಾಲಯ ಅದೇಶ ನೀಡಿ ಎರಡು ವರ್ಷ ಕಳೆದರೂ ಪರಿಹಾರ ನೀಡಲು ಅಧಿಕಾರಿಗಳು ವಿಫಲರಾದ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಕಚೇರಿ ಜಪ್ತಿಗೆ ಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆ ಅಮೀನರು ಉಪವಿಭಾಗಾಧಿಕಾರಿ ಕಚೇರಿಯ ಕಂಪ್ಯೂಟರ್, ಕುರ್ಚಿ, ಕಡತಗಳು ಸೇರಿದಂತೆ ಮೌಲ್ಯಯುತ ಚರಾಸ್ತಿಗಳನ್ನು ಜಪ್ತಿ ಮಾಡಿದರು.

ಪರಿಹಾರ ಮೊತ್ತ ಪಡೆಯಲು ಕಾನೂನು ಹೋರಾಟ ನಡೆಸುತ್ತಿರುವ ರೈತ ಸತ್ಯನಾರಾಯಣ ಮಾತನಾಡಿ, ಕಳೆದೆರಡು ವರ್ಷದಲ್ಲಿ ಎರಡು ಬಾರಿ ವಾಹನ ಜಪ್ತಿಗೆ, ಚರಾಸ್ತಿ ಜಪ್ತಿಗೆ ನ್ಯಾಯಾಲಯ ಆದೇಶ ಹೊರಡಿಸಿದೆ. ಅಧಿಕಾರಿಗಳು ಜಪ್ತಿಗೆ ತೆರಳಿದಾಗ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಕಾಲಾವಕಶ ಕೇಳಿಕೊಂಡಿದ್ದರು. ಆನಂತರದಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.

ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ನ್ಯಾಯಾಲಯದ ತೀರ್ಪಿನಂತೆ ಬಡ್ಡಿ ಸೇರಿ 4.89 ಕೋಟಿ ರೂ. ಪರಿಹಾರದ ಮೊತ್ತ ಸಿಗಬೇಕಿದೆ. ಈ ಹಿಂದಿನ ಸರಕಾರ ರೈತರಿಗೆ ಜಮೀನಿಗೆ ಪರಿಹಾರ ಒದಗಿಸಲು 19.90 ಕೋಟಿ ರೂ. ಮೊತ್ತವನ್ನು ಬಿಡುಗಡೆ ಮಾಡಿದೆ. ಆದರೆ, ಪುರಸಭೆ ಅಧಿಕಾರಿಗಳು ಪರಿಹಾರ ಮೊತ್ತವನ್ನು ಒದಗಿಸಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಹೀಗಾಗಿ ಹೋರಾಟದ ಮೂಲಕ ಪರಿಹಾರದ ಮೊತ್ತವನ್ನು ಪಡೆಯಲು ನ್ಯಾಯಾಲಯ ಮೋರೆ ಹೋಗಿದ್ದೇವೆ. ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಸಹ ಪಾಲಿಸುತ್ತಿಲ್ಲ. ಅಧಿಕಾರಿಗಳು ಪರಿಹಾರದ ಮೊತ್ತ ಒದಗಿಸದಿದ್ದರೆ ಮುಂದಿನ ಕಾನೂನು ಹೋರಾಟ ನಡೆಸುವುದಾಗಿ ಅವರು ತಿಳಿಸಿದರು.

ಈ ವೇಳೆ ಕೋರ್ಟ್ ಅಮೀನರಾದ ಸೂರ್ಯನಾರಾಯಣ, ಸಿದ್ದರಾಜು, ಸತೀಶ್, ಆನಂದ, ರೈತ ಕ್ಯಾತನಹಳ್ಳಿ ಮಹದೇವು ಇತರರು ಇದ್ದರು.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News