ಮಂಡ್ಯ | ಕಾಡಾನೆ ದಾಳಿ; ಕೃಷಿ ಕಾರ್ಮಿಕ ಮಹಿಳೆ ಸ್ಥಳದಲ್ಲೇ ಮೃತ್ಯು
ಮಂಡ್ಯ, ನ.19: ಕಾಡಾನೆ ದಾಳಿಗೆ ಕೃಷಿಕೂಲಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಲಾಳನಕೆರೆ-ಪಿಹಳ್ಳಿ ಬಳಿ ರವಿವಾರ ಬೆಳಗ್ಗೆ ನಡೆದಿದೆ.
ಲಾಳನಕೆರೆ ಗ್ರಾಮದ ದಿವಂಗತ ಸಿದ್ದಪ್ಪ ಅವರು ಪತ್ನಿ ಸಾಕಮ್ಮ(40) ಆನೆ ದಾಳಿಗೆ ಬಲಿಯಾದ ಮಹಿಳೆ. ಈಕೆ ಬೆಳಗ್ಗೆ ಜಮೀನು ಬಳಿ ಕೆಲಸಕ್ಕೆ ತೆರಳಿದಾಗ ಈ ಘಟನೆ ಸಂಭವಿಸಿದೆ.
ಪೀಹಳ್ಳೀ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಕೂಲಿ ಕೆಲಸದಲ್ಲಿ ತೊಡಗಿದ್ದ ಕೂಲಿಕಾರರ ಕಡೆಗೆ ಪಕ್ಕದ ಕಬ್ಬಿನ ಗದ್ದೆಯಿಂದ ಹೊರಬಂದ ಆನೆ ದಾಳಿಗೆ ಮುಂದಾಗಿದೆ. ಈ ವೇಳೆ ಕೂಲಿಕಾರರು ಚೆಲ್ಲಾಪಿಲ್ಲಿಯಾಗಿ ಓಡಿ ಆನೆ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಆದರೆ, ಸಾಕಮ್ಮ ಆನೆ ದಾಳಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯಿಂದ ಗ್ರಾಮಸ್ಥರು ತೀವ್ರ ಆತಂಕಗೊಂಡಿದ್ದು, ಕೂಡಲೇ ಅರಣ್ಯ ಇಲಾಖೆಯವರು ಕಾಡಾನೆಯನ್ನು ಅರಣ್ಯಕ್ಕೆ ಅಟ್ಟುವ ಕೆಲಸವನ್ನು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಶಾಸಕ, ಜಿಲ್ಲಾಧಿಕಾರಿ ಭೇಟಿ:
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ತಹಶೀಲ್ದಾರ್ ಶಿವಕುಮಾರ್ ಬಿರಾದಾರ್, ಅರಣ್ಯ ಅಧಿಕಾರಿಗಳು, ಸಾಕಮ್ಮನ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಘಟನೆ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಇತ್ತೀಚೆಗೆ ಕಾಡಾನೆಗಳ ಕಾಟ ಹೆಚ್ಚಾಗುತ್ತಿದೆ. ಅರಣ್ಯ ಇಲಾಖೆಯವರು ಇವುಗಳ ನಿಯಂತ್ರಣಕ್ಕೆ ಕ್ರಮವಹಿಸಬೇಕು. ಸಾಕಮ್ಮ ಕುಟುಂಬದವರಿಗೆ ಪರಿಹಾರವನ್ನು ಕೊಡಿಸಲಾಗುವುದು. ಸಾರ್ವಜನಿಕರು ಭಯಪಡಬಾರದು. ಆದರೆ, ಎಚ್ಚರಿಕೆಯಿಂದ ಇರಬೇಕು ಎಂದರು.
ಆನೆಯು ಗ್ರಾಮದ ಪಕ್ಕದಲ್ಲೇ ಹರಿಯುತ್ತಿರುವ ನಾಲೆಗೆ ಇಳಿದಿದೆ. ಅರಣ್ಯ ಇಲಾಖೆಯವರು ಹಾಗೂ ಪೊಲೀಸರು ಆನೆಯನ್ನು ಕಾಡಿಗೆ ಓಡಿಸಲು ಕಾರ್ಯಾಚರಣೆ ಮಾಡುತ್ತಿದ್ದಾರೆ.