ಬೆಳಗಾವಿಯ ಮರಾಠಿ ಭಾಷಿಗರು ಕೂಡ ಕರ್ನಾಟಕದವರೇ, ಎಲ್ಲರ ಐಕ್ಯತೆ ಮೊದಲ ಕರ್ತವ್ಯ: ಡಿ.ಕೆ.ಶಿವಕುಮಾರ್

Update: 2024-02-14 08:30 GMT

ಬೆಂಗಳೂರು: “ಬೆಳಗಾವಿಯಲ್ಲಿ ಇರುವ ಮರಾಠಿ ಭಾಷಿಗರು ಕೂಡ ಕರ್ನಾಟಕದವರೇ. ಎಲ್ಲರೂ ಐಕ್ಯತೆಯಿಂದ ಒಟ್ಟಿಗೆ ಹೋಗುವುದು ಮೊದಲ ಕರ್ತವ್ಯವಾಗಬೇಕು. ಕರ್ನಾಟಕದ ಭೂಮಿ, ನಮ್ಮ ಕನ್ನಡ ಭಾಷೆಗೆ ಮೊದಲ ಆದ್ಯತೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯಿಸಿದರು.

ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಹೆಚ್ಚುತ್ತಿದ್ದು, ಕಚೇರಿ ತೆರೆಯಲು ಮಹಾರಾಷ್ಟ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ ಎನ್ನುವ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ.

“ಬೆಳಗಾವಿಯ ಗ್ರಾಮೀಣ ಭಾಗದ ಜನರಿಗೆ ನಮ್ಮ ಸರ್ಕಾರ ಸಾಕಷ್ಟು ಅನುಕೂಲತೆಗಳನ್ನು ಕಲ್ಪಿಸಿಕೊಟ್ಟಿದೆ. ಅವರು ನಮ್ಮ ನೀರು, ಗಾಳಿ ಕುಡಿಯುತ್ತಿದ್ದಾರೆ. ನಮ್ಮ ಭೂಮಿಯಲ್ಲಿ ವಾಸವಾಗಿದ್ದಾರೆ. ವ್ಯವಸಾಯ ಮಾಡುತ್ತಿದ್ದಾರೆ. ಈ ಬಜೆಟ್ ನಲ್ಲಿ ಬೆಳಗಾವಿ ಗ್ರಾಮೀಣ ಭಾಗದ ಕೃಷಿ ಭೂಮಿಗಳಿಗೆ ನೀರನ್ನು ಒದಗಿಸಲು ರೂ.900 ಕೋಟಿ ವೆಚ್ಚದಲ್ಲಿ ಯೋಜನೆ ಘೋಷಣೆ ಮಾಡಲಿದ್ದೇವೆ.” ಎಂದು ಹೇಳಿದರು.

 “ಲೋಕಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಬಹುತೇಕ ಅಂತಿಮ ಹಂತಕ್ಕೆ ತೆಗೆದುಕೊಂಡು ಹೋಗುತ್ತೇವೆ. ಈ ವಿಚಾರವಾಗಿ ನಾನು ಮತ್ತು ಮುಖ್ಯಮಂತ್ರಿಗಳು ಒಂದು ಸುತ್ತಿನ ಮಾತುಕಥೆ ನಡೆಸಿದ್ದೇವೆ. ಈಗ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಜತೆ ಸಭೆ ಮಾಡುತ್ತೇವೆ, ನಂತರ ಸ್ಕ್ರೀನಿಂಗ್ ಸಮಿತಿ ಸದಸ್ಯರು ಚರ್ಚಿಸಿ ಹೈಕಮಾಂಡ್ ಗೆ ಪಟ್ಟಿ ಕಳಿಸುತ್ತೇವೆ.” ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News