‘ಆರೆಸ್ಸೆಸ್ ರಾಷ್ಟ್ರೋತ್ಥಾನ’ ಭೂಮಿ ವಾಪಸ್ಸು ಪಡೆಯಬೇಕೆಂದು ಬಿಜೆಪಿ ಹೇಳಲಿ : ಎಂ.ಬಿ.ಪಾಟೀಲ್ ಸವಾಲು
ಬೆಂಗಳೂರು : ಆರೆಸ್ಸೆಸ್ ಅಂಗ ಸಂಸ್ಥೆಯಾಗಿರುವ ರಾಷ್ಟ್ರೋತ್ಥಾನ ಪರಿಷತ್ತಿಗೆ ಹೈಟೆಕ್ ಡಿಫೆನ್ಸ್ ಪಾರ್ಕಿನಲ್ಲಿ ವಿವಿಧೋದ್ದೇಶ ವಾಣಿಜ್ಯ ಸಂಕೀರ್ಣಕ್ಕೆಂದು ಕೊಟ್ಟ ಭೂಮಿ ಉಪಯೋಗಿಸುತ್ತಿಲ್ಲ. ಇದನ್ನು ವಾಪಸ್ಸು ಪಡೆಯಬೇಕೆಂದು ಬಿಜೆಪಿ ನಾಯಕರು ಹೇಳಲಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸವಾಲು ಹಾಕಿದ್ದಾರೆ.
ಗುರುವಾರ ವಿಧಾನಸೌದದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2013ರಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿಗೆ ಹೈಟೆಕ್ ಡಿಫೆನ್ಸ್ ಪಾರ್ಕಿನಲ್ಲಿ ವಿವಿಧೋದ್ದೇಶ ವಾಣಿಜ್ಯ ಸಂಕೀರ್ಣಕ್ಕೆಂದು 5 ಎಕರೆ ಕೊಡಲಾಗಿದೆ. ಇದುವರೆಗೂ ಅವರು ಅಲ್ಲಿ ಏನೂ ಮಾಡಿಲ್ಲ ಎಂದರು.
ಅದರಲ್ಲೂ, ಕೋವಿಡ್ ನೆಪ ಹೇಳಿಕೊಂಡು ಮತ್ತೆ ಮತ್ತೆ ಕಾಲಾವಕಾಶ ಕೇಳಿಕೊಂಡು ಬಂದಿದ್ದಾರೆ. ಇತ್ತೀಚೆಗೆ ಪುನಃ ಎರಡು ವರ್ಷಗಳ ಸಮಯ ತೆಗೆದುಕೊಂಡಿದ್ದಾರೆ. ಈ ಜಮೀನನ್ನು ವಾಪಸ್ ಪಡೆಯಬೇಕೋ ಬೇಡವೋ ಎನ್ನುವುದನ್ನು ಬಿಜೆಪಿ ನಾಯಕರಾದ ಲೆಹರ್ ಸಿಂಗ್ ಮತ್ತು ಛಲವಾದಿ ನಾರಾಯಣಸ್ವಾಮಿ ಹೇಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅದೇ ರೀತಿ, ಮುರುಗೇಶ ನಿರಾಣಿ ಹಿಂದೆ ಕೈಗಾರಿಕಾ ಸಚಿವರಾಗಿದ್ದಾಗ ಬಾಗಲಕೋಟೆಯ ನವನಗರ ಕೈಗಾರಿಕಾ ಪ್ರದೇಶದಲ್ಲಿ 2012ರ ಮಾರ್ಚ್ 12ರಂದು ತಮಗೆ ತಾವೇ 25 ಎಕರೆ ಕೊಟ್ಟುಕೊಂಡು, ಅಲ್ಲಿ ತೇಜಸ್ ಇಂಟನ್ರ್ಯಾಷನಲ್ ಸ್ಕೂಲ್ ಕಟ್ಟಿದ್ದಾರೆ. ಅದು ಆಗ್ರೋ ಟೆಕ್ ಪಾರ್ಕಗೆ ಮೀಸಲಾಗಿದ್ದ ಜಾಗ. ಆಮೇಲೆ ಪುನಃ ಕೈಗಾರಿಕಾ ಸಚಿವರಾದಾಗ ಕೂಡ 2022ರ ಡಿ.19ರಂದು ಅಲ್ಲೇ ಮತ್ತೆ 6.17 ಎಕರೆ ತೆಗೆದುಕೊಂಡು, ತಮಗೆ ತಾವೇ ಅಭಿನಂದನಾ ಪತ್ರ ಬರೆದುಕೊಂಡಿದ್ದಾರೆ ಎಂದು ಅವರು ಅಂಕಿಅಂಶಗಳ ಸಹಿತ ವಿವರಿಸಿದರು.
ಚಾಣಕ್ಯ ವಿ.ವಿ.ಯದೂ ಇದೇ ಕತೆಯಾಗಿದೆ. 2025ರ ಜೂನ್ ಒಳಗೆ ಅವರು 116 ಎಕರೆಯಲ್ಲಿ ಕನಿಷ್ಠ ಶೇ.51ರಷ್ಟು ಜಾಗವನ್ನು ಬಳಕೆ ಮಾಡದಿದ್ದರೆ ಉಳಿದ ಜಾಗವನ್ನು ವಾಪಸ್ ತೆಗೆದುಕೊಳ್ಳಲಾಗುವುದು ಎಂದ ಅವರು, ಚಾಣಕ್ಯ ವಿವಿಗೂ ಕೇವಲ 50 ಕೋಟಿಗೆ ಈ ಜಮೀನು ನೀಡಿದ್ದು, ಇದರಿಂದ ಕೆಐಎಡಿಬಿಗೆ 137 ಕೋಟಿ ರೂಪಾಯಿ ನಷ್ಟ ಆಗಿದೆ. ಇದರ ವಿರುದ್ಧ ಏಕೆ ನಾರಾಯಣಸ್ವಾಮಿ ರಾಜ್ಯಪಾಲರಿಗೆ ದೂರು ನೀಡಿಲ್ಲ ಎಂದು ಸಚಿವರು ಪ್ರಶ್ನಿಸಿದರು.