ಮಾಧ್ಯಮಗಳು ಮೌಢ್ಯ, ಕಂದಾಚಾರಗಳಿಗೆ ಆಸ್ಪದ ಕೊಡಬಾರದು: ಮುಖ್ಯಮಂತ್ರಿ ಸಿದ್ಧರಾಮಯ್ಯ

Update: 2023-12-22 10:54 GMT

ಮೈಸೂರು: ಮಾಧ್ಯಮಗಳು ತಮ್ಮ ವೃತ್ತಿಪರತೆಯನ್ನು ಎತ್ತಿ ಹಿಡಿಯವಂತಹ ಸುದ್ದಿಗಳನ್ನು ಸಮಾಜಕ್ಕೆ ನೀಡಬೇಕು. ಅದು ಬಿಟ್ಟು ಮೌಢ್ಯ, ಕಂದಾಚಾರಗಳಿಗೆ ನೀವೇ ಆಸ್ಪದ ಕೊಡಬಾರದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾಧ್ಯಮಗಳಿಗೆ ಮನವಿ ಮಾಡಿಕೊಂಡರು.

ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಕೆ.ಎನ್.ಎಸ್ ಬಡಾವಣೆಯ ಆವರಣದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ನೂತನವಾಗಿ ನಿರ್ಮಾಣ ಮಾಡುತ್ತಿರುವ ಪತ್ರಿಕಾ ಭವನ ಹಾಗೂ ತರಬೇತಿ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿ ಬಳಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

"ಮಾಧ್ಯಮಗಳು ಜನಪರ ಮತ್ತು ವಸ್ತು ನಿಷ್ಠ ಸುದ್ದಿಗಳನ್ನು ನೀಡಬೇಕು, ಅದು ಬಿಟ್ಟು ನನ್ನ ಕಾರಿನ ಮೇಲೆ ಕಾಗೆ ಕುಳಿತದ್ದನ್ನೂ ಸುದ್ದಿ ಮಾಡ್ತೀರಿ, ಚರ್ಚೆ ಮಾಡ್ತೀರಿ. ಕಾಗೆ ಕುಳಿತರೆ ನಿಮಗೇನು ನಷ್ಟ? ಸಮಾಜಕ್ಕೇನು ನಷ್ಟ" ಎಂದು ಪ್ರಶ್ನಿಸಿದರು.

ʼನಾನು ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ ಎಂದು ಸುದ್ದಿ ಮಾಡುತ್ತೀರಿ. ನಾನು ಅಧಿಕಾರ ಕಳೆದುಕೊಂಡಿದ್ದೇನಾ? ಚಾಮರಾಜನಗರಕ್ಕೆ ಭೇಟಿ ನೀಡಿದ ಮೇಲೆ ಮೂರು ವರ್ಷ ನಾನೇ ಮುಖ್ಯಮಂತ್ರಿಯಾಗಿ ಮುಂದುವರೆದೆ. ನೀವೇ ಮೌಢ್ಯ ಕಂದಾಚಾರದಂತಹ ಸುದ್ದಿಗಳನ್ನು ಮಾಡಿದರೆ ಹೇಗೆʼ ಎಂದು ಪ್ರಶ್ನಿಸಿದರು.

ಊಹಾ-ಪೋಹ ಸುದ್ದಿ ಮಾಡುವುದೇ ವೃತ್ತಿಪರತೆಯಾ ? ಕಲ್ಪಿಸಿಕೊಂಡು, ಊಹಿಸಿಕೊಂಡು ಸುದ್ದಿ ಮಾಡುವವರು ಹೆಚ್ಚಾಗಿರುವುದು ಕೆಟ್ಟ ಬೆಳವಣಿಗೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಸಂವಿಧಾನ ವಿರೋಧಿಗಳನ್ನೂ ಪ್ರಶ್ನಿಸದೇ ಹೋದರೆ, ಅವರನ್ನೂ ನೀವು ಗೌರವದಿಂದ ನಡೆಸಿಕೊಂಡರೆ ನಿಮ್ಮನ್ನು ಸಮಾಜದ ನಾಲ್ಕನೇ ಅಂಗ ಅಂತ ಕರೆಯೋಕೆ ಆಗುತ್ತದೆಯೇ? ವಸ್ತುನಿಷ್ಠ ಸುದ್ದಿ, ಸತ್ಯದ ವರದಿ ಮಾತ್ರ ಸಮಾಜಮುಖಿಯಾಗಿರುತ್ತದೆ ಎಂದು ಹೇಳಿದರು.

ನಾವು ಕೆಲವೊಂದು ಪತ್ರಿಕೆಗಳನ್ನು ಕಾದು ತೆಗೆದುಕೊಂಡು ಓದುತ್ತಿದ್ದೆವು. ಯಾಕೆಂದರೆ ಆ ಪತ್ರಿಕೆಯಲ್ಲಿ ನಮ್ಮ ಊರಿನ ಮತ್ತು ಸಮಾಜಮುಖಿ ಸುದ್ದಿ ಇರುತ್ತದೆ ಎಂದು. ಪತ್ರಿಕೆ ಬರುದವುದನ್ನೆ ಕುತೂಹಲದಿಂದ ಕಾಯುತ್ತಿದ್ದೆವು ಅಂತಹ ಕುತೂಹಲ ಸುದ್ದಿಗಳನ್ನು ಬರೆದಾಗ ಪತ್ರಿಕೋದ್ಯಮ ಗಟ್ಟಿಯಾಗಿ ನಿಲ್ಲುತ್ತದೆ ಎಂದು ಹೇಳಿದರು.

ನಾನು ಶಂಕುಸ್ಥಾಪನೆ ಮಾಡಿದ ಪತ್ರಿಕಾ ಭವನ ಮತ್ತು ತರಬೇತಿ ಕೇಂದ್ರವನ್ನು ನಾನೇ ಉದ್ಘಾಟಿಸುತ್ತೇನೆ ಎಂದ ಅವರು ನೂತನ‌ ಪತ್ರಿಕಾ ಭವನಕ್ಕೆ ಅಗತ್ಯ ನೆರವು ನೀಡುವುದಾಗಿ ತಿಳಿಸಿದರು.

ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ  ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಅವರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಜಿಲ್ಲೆಯ ಶಾಸಕರುಗಳಾದ ಜಿ.ಟಿ.ದೇವೇಗೌಡ, ಶ್ರೀವತ್ಸ, ತನ್ವೀರ್ ಸೇಠ್, ಹರೀಶ್ ಗೌಡರು, ಡಿ.ರವಿಶಂಕರ್, ಅನಿಲ್ ಚಿಕ್ಕಮಾದು, ಆಶ್ರಯ ಸಮಿತಿ ಅಧ್ಯಕ್ಷರಾದ ಡಾ.ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಮರಿತಿಬ್ಬೇಗೌಡ, ಎ.ಎಚ್.ವಿಶ್ವನಾಥ್, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹೆಚ್.ಬಿ.ಮದನ್ ಗೌಡ, ಪತ್ರಕರ್ತರ ಸಂಘಗಳ ಒಕ್ಕೂಟದ ಮುಖಂಡರಾದ ಮಲ್ಲಿಕಾರ್ಜುನಯ್ಯ ಸೇರಿ ಹಲವು ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯಕ್ಕೆ ಸಂವಿಧಾನದಲ್ಲೇ ಅವಕಾಶ ಇದೆ. ಹಾಗಾಗಿ ನನ್ನ ಬಗ್ಗೆ ಯಾರೇ ಏನೆ ಸುದ್ದಿ ಮಾಡಿದರೆ ಇದೂವರೆಗೂ ನಾನು ಯಾರನ್ನು ಪ್ರಶ್ನಿಸಿಲ್ಲ. ದೂರವಾಣಿ ಮೂಲಕವೂ ಅವರೊಂದಿಗೆ ಮಾತನಾಡಿಲ್ಲ.

- ಸಿದ್ಧರಾಮಯ್ಯ, ಮುಖ್ಯಮಂತ್ರಿ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News