ಕೃಷಿ ವಿವಿ ಸಂಶೋಧನೆ, ತಂತ್ರಜ್ಞಾನವನ್ನು ರೈತರು ಬಳಸಿಕೊಳ್ಳಲಿ : ಸಚಿವ ಚಲುವರಾಯಸ್ವಾಮಿ
ಬೆಂಗಳೂರು : ರೈತರು ಕೃಷಿ ವಿಶ್ವವಿದ್ಯಾಲಯಗಳು ನಡೆಸುವ ಸಂಶೋಧನೆಗಳು ಹಾಗೂ ತಂತ್ರಜ್ಞಾನಗಳನ್ನು ಬಳಸಿ ಮಿಶ್ರ ಬೇಸಾಯ ಪದ್ದತಿ ಮಾಡಿದರೆ, ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆಯಲು ಸಾಧ್ಯ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಗುರುವಾರ ಇಲ್ಲಿನ ಜಿಕೆವಿಕೆ ಆವರಣದಲ್ಲಿ ಬೆಂಗಳೂರು ಕೃಷಿ ವಿವಿ ವತಿಯಿಂದ ಏರ್ಪಡಿಸಲಾಗಿದ್ದ ಕೃಷಿ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ತಂತ್ರಜ್ಞಾನ ಜೊತೆಗೆ ಸಮಗ್ರ ಬೇಸಾಯ ಅಳವಡಿಕೆಯಿಂದ ಸುಸ್ಥಿರ ಹಾಗೂ ಲಾಭದಾಯಕ ಕೃಷಿಗೆ ದಾರಿಯಾಗಿದೆ. ರೈತರು ಈ ನಿಟ್ಟಿನಲ್ಲಿ ಗಮನ ಹರಿಸುವ ಅಗತ್ಯವಿದೆ ಎಂದರು.
ರಾಷ್ಟ್ರದಲ್ಲಿ ಶೇ.75 ಜನರು ಕೃಷಿಯನ್ನು ಅವಲಂಭಿಸಿದ್ದು, 60ರ ದಶಕದಲ್ಲಿ ದೇಶದಲ್ಲಿ ನಡೆದ ಹಸಿರು ಕ್ರಾಂತಿ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಭನೆ ಸಾಧಿಸಲು ಸಾಧ್ಯವಾಯಿತು. 1964-65ರಲ್ಲಿ ಆಹಾರ ಉತ್ಪಾದನೆ ರಾಷ್ಟ್ರಮಟ್ಟದಲ್ಲಿ 45.4 ಮಿಲಿಯನ್ ಟನ್‍ಗಳಷ್ಟಿದ್ದು, 2023-24ರ ಸಾಲಿಗೆ 332.22 ಮಿಲಿಯನ್ ಟನ್‍ಗಳಿಗೆ ಏರಿಕೆಯಾಗಿದೆ. 2047ರ ವೇಳೆಗೆ 437 ಮಿಲಿಯನ್ ಟನ್‍ಗೆ ಯೋಜನೆಯನ್ನು ರೂಪಿಸಿದೆ ಎಂದು ಅವರು ತಿಳಿಸಿದರು.
ಆಹಾರ ಉತ್ಪಾದನೆ ಹೆಚ್ಚಳದಲ್ಲಿ ಕೃಷಿ ವಿಶ್ವವಿದ್ಯಾನಿಲಯಗಳ ಸಂಶೋಧನೆಗಳ ಪಾತ್ರವೂ ಮಹತ್ವದಾಗಿದೆ. ವಿಶ್ವವಿದ್ಯಾನಿಲಯಗಳು ನಿರಂತರವಾಗಿ ಹೊಸ ತಳಿಗಳನ್ನು ಸಂಶೋಧಿಸಿ ಬಿಡುಗಡೆ ಮಾಡುತ್ತಿದ್ದು, ಕಡಿಮೆ ನೀರು ಹಾಗೂ ವೆಚ್ಚದಲ್ಲಿ ಹೆಚ್ಚು ಇಳುವರಿ ಪಡೆಯಬಹುದಾಗಿದೆ. ರೈತರು ಈ ಸಂಶೋಧನೆಗಳ ಲಾಭ ಪಡೆಯಬೇಕು ಎಂದು ಕರೆ ನೀಡಿದರು.
ಈ ಬಾರಿ ‘ಹವಾಮಾನ ಚತುರ ಡಿಜಿಟಲ್ ಕೃಷಿ’ ಎಂಬ ಘೋಷವಾಕ್ಯದೊಂದಿಗೆ ಈ ಮೇಳವನ್ನು ಆಯೋಜಿಸುತ್ತಿರುವುದು ಕೃಷಿ ಕ್ಷೇತ್ರದ ಸಕಾಲಿಕ ಚಿಂತನೆಯಾಗಿ ಎದ್ದು ಕಾಣುತ್ತಿದೆ. ರೈತ ಕುಟುಂಬಗಳಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ. ರೈತರು ತಮ್ಮ ಶ್ರಮ ಮತ್ತು ಚಿಂತನೆಯಿಂದ ಆರ್ಥಿಕವಾಗಿ ಸಬಲರಾಗಲು ಒಂದು ಒಳ್ಳೆಯ ಅವಕಾಶವನ್ನು ಕಲ್ಪಿಸಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಸುಮಾರು 78 ಲಕ್ಷಕ್ಕೂ ಹೆಚ್ಚು ರೈತರು ಹಾಗೂ 125 ಲಕ್ಷಕ್ಕೂ ಹೆಚ್ಚು ಕೃಷಿ ಕಾರ್ಮಿಕರು ಕೃಷಿಯಲ್ಲಿ ತೊಡಗಿದ್ದಾರೆ. ರಾಜ್ಯ ಸರಕಾರ ಕೃಷಿಗೆ ಗರಿಷ್ಠ ಆದ್ಯತೆ ನೀಡಿದೆ. ಹಿಂದಿನ ಸಾಲಿನಲ್ಲಿ ಸುಮಾರು ಒಂದು ಸಾವಿರ ಕೋಟಿ ರೂಪಾಯಿ ಸಬ್ಸಿಡಿಯೊಂದಿಗೆ ಯಂತ್ರೋಪಕರಣ, ನೀರಾವರಿ ಸಲಕರಣೆಗಳನ್ನು ವಿತರಿಸಿದೆ. 2,100 ಕೋಟಿ ರೂಪಾಯಿ ಬೆಳೆ ವಿಮೆ ಹಣವನ್ನು ನೇರ ನಗದು ವರ್ಗಾವಣೆ ಮೂಲಕ ರೈತರಿಗೆ ಭರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ರೈತರಿಗೆ ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆ ರೂಪಿಸಿ, ಆರ್ಥಿಕ ನೆರವಿನೊಂದಿಗೆ ಬೃಹತ್ ಬೆಳೆ ಕಟಾವು ಯಂತ್ರಗಳನ್ನು ವಿತರಿಸಲಾಗಿದೆ. ಐದು ಗ್ಯಾರಂಟಿ ಯೋಜನೆಗಳ ಮೂಲಕವು ಕೃಷಿ ಸಮುದಾಯ ಹಾಗೂ ಜನ ಸಾಮಾನ್ಯರಿಗೆ ನಮ್ಮ ಸರಕಾರ ನೆರವು ಒದಗಿಸಿದೆ ಎಂದು ಸಚಿವರು ತಿಳಿಸಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕೃಷಿಮೇಳ ದೇಶದಲ್ಲೇ ಹೆಸರುವಾಸಿಯಾಗಿದೆ. ಈ ಭಾರಿ ಸುಮಾರು 700 ಮಳಿಗೆಗಳನ್ನು ತೆರೆಯಲಾಗಿದ್ದು, ಹೊಸ ಹೊಸ ತಂತ್ರಜ್ಞಾನಗಳು, ತಳಿಗಳ ಪ್ರದರ್ಶನ ಮತ್ತು ಮಾರಾಟ ಮೇಳ ಲಕ್ಷಾಂತರ ಜನರನ್ನು ಆಕರ್ಷಿಸುತ್ತಿದೆ. ಸಾರ್ವಜನಿಕರು, ರೈತರು ಕೃಷಿ ಮೇಳದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದ ಅವರು, ಕೃಷಿ ಪದವೀಧರರು ಸ್ವಯಂ ಉದ್ಯೋಗ ಅಳವಡಿಸಿಕೊಂಡು ಇತರರಿಗೆ ಉದ್ಯೋಗ ನೀಡುವಂತವರಾಗಬೇಕು ಎಂದು ಕರೆ ನೀಡಿದರು.
ಕಾರ್ಯಕಮದಲ್ಲಿ ಶಾಸಕ ಎಸ್.ಆರ್. ವಿಶ್ವನಾಥ್, ಶಾಸಕ ಶರತ್ ಬಚ್ಚೇಗೌಡ, ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ವಿ.ಸುರೇಶ ಸೇರಿ ಕೃಷಿ ವಿಶ್ವವಿದ್ಯಾನಿಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರು, ರೈತರು ಉಪಸ್ಥಿತರಿದ್ದರು.