"ಸಾವಿನಲ್ಲಿ ರಾಜಕಾರಣ ನಡೆಸುವುದು ನಾಗರಿಕ ಸಮಾಜ ಒಪ್ಪುವುದಿಲ್ಲ": ವಿಜಯೇಂದ್ರ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ

Update: 2024-11-28 13:26 GMT

ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು: ಸಾವಿನಲ್ಲಿ ರಾಜಕಾರಣ ನಡೆಸುವುದು ಹಾಗೂ ರಾಜಕೀಯ ಹುಡುಕುವುದೇ ಹೇಯ. ಇದು ನಾಗರಿಕ ಸಮಾಜ ಒಪ್ಪುವ ಸಂಗತಿಯಲ್ಲವೇ ಅಲ್ಲ ಎಂಬುದನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಮೊದಲು ತಿಳಿಸಬಯಸುತ್ತೇನೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

‘ಆರೋಗ್ಯ ಕ್ಷೇತ್ರದ ದಿವ್ಯ ನಿರ್ಲಕ್ಷ್ಯದಿಂದಾಗಿ ರಾಜ್ಯದೆಲ್ಲೆಡೆ ನವಜಾತ ಶಿಶುಗಳ ಸಾವು ಹೆಚ್ಚುತ್ತಿದ್ದರೂ ಹಸುಗೂಸುಗಳು, ತಾಯಂದಿರ ರಕ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಕಾಂಗ್ರೆಸ್ ಸರಕಾರ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾಡಿರುವ ಆರೋಪಕ್ಕೆ ಎಕ್ಸ್ ಜಾಲತಾಣದಲ್ಲಿ ಅವರು ತಿರುಗೇಟು ನೀಡಿದ್ದಾರೆ.

ಸಾರ್ವತ್ರಿಕ ಆರೋಗ್ಯ ವ್ಯವಸ್ಥೆಯ ಸುಧಾರಣೆ ಎಂಬುದು ನಿರಂತರ ಪ್ರಕ್ರಿಯೆ. ಇಲ್ಲಿ ಸವಾಲು ಹಾಗೂ ಸಂವೇದನೆಗೆ ನಮ್ಮನ್ನು ನಿತ್ಯ ಒಡ್ಡಿಕೊಳ್ಳಬೇಕಾಗುತ್ತದೆ. ಈ ದಿಶೆಯಲ್ಲಿ ನಾನು ಆತ್ಮಸಾಕ್ಷಿಗೆ ಅನುಗುಣವಾಗಿ ಪ್ರತಿದಿನವೂ ಹೆಜ್ಜೆ ಇಡುತ್ತಿದ್ದೇನೆ. ಕಳೆದ ಒಂಭತ್ತು ತಿಂಗಳಲ್ಲಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ನಡೆದಿದೆ ಎಂದು ನೀವು ಕೊಟ್ಟಿರುವ ಸಾವಿನ ಲೆಕ್ಕಾಚಾರವೇ ಕಪೋಲ ಕಲ್ಪಿತ ಮತ್ತು ಉತ್ಪ್ರೇಕ್ಷೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

2019ರಿಂದ ಇಲ್ಲಿಯವರೆಗಿನ ಅಧಿಕೃತ ಅಂಕಿ ಸಂಖ್ಯೆಗಳನ್ನು ಅವಲೋಕಿಸಿದಾಗ ಈ ವರ್ಷ ಅತಿ ಕಡಿಮೆ ಬಾಣಂತಿ ಹಾಗೂ ನವಜಾತ ಶಿಶು ಸಾವು ಸಂಭವಿಸಿದೆ. ನನಗೆ ಗೊತ್ತು ಒಂದು ಸಾವು ಸಂಭವಿಸಿದರೂ ಅದು ಸಾವೇ. ಆ ಬಗ್ಗೆ ಯಾರೂ ಸ್ಪಷ್ಟನೆ ಮತ್ತು ಸಮಜಾಯಿಸಿ ಕೊಡುವ ಪ್ರಶ್ನೆ ಉದ್ಭವಿಸದು. ಅಷ್ಟಕ್ಕೂ ಕೋವಿಡ್ ಸಂದರ್ಭದಲ್ಲಿ ಆದಂತೆ ರಾಜ್ಯದಲ್ಲಿ ನಡೆದ ಸಾವಿನ ಪ್ರಮಾಣವನ್ನು ಮುಚ್ಚಿಟ್ಟಿದ್ದರೆ ಮಾತ್ರ ಅದನ್ನು ವೈಫಲ್ಯ, ಅಸಾಮರ್ಥ್ಯ ಅಥವಾ ಹಗರಣಗಳ ಸಾಲಿಗೆ ಸೇರಿಸಬಹುದಲ್ಲವೇ? ಎಂದು ಅವರು ವಿಜಯೇಂದ್ರಗೆ ಪ್ರಶ್ನಿಸಿದ್ದಾರೆ.

ಅಷ್ಟಕ್ಕೂ ನೀವು ಉಲ್ಲೇಖಿಸಿದ ಇತ್ತೀಚಿನ ಬಳ್ಳಾರಿಯ ಘಟನೆಯ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ನಾನೇ ಸ್ವಯಂ ಪ್ರೇರಣೆಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂವರು ಹಿರಿಯ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಲು ಸೂಚಿಸಿದ್ದೆ ಎಂದು ಅವರು ತಿಳಿಸಿದ್ದಾರೆ.

ನ.14ರಂದು ಘಟನೆ ನಡೆದ ಆಸ್ಪತ್ರೆಗೆ ಭೇಟಿ ನೀಡಿದ ಈ ತಂಡ ನ.9 ರಿಂದ ನ.11ರ ಅವಧಿಯಲ್ಲಿ ನಡೆದ 34 ಸಿಜರೀಯನ್ ಪ್ರಕರಣ ಅವಲೋಕಿಸಿದೆ. ಇದರಲ್ಲಿ ಏಳು ಪ್ರಕರಣ ಮಾತ್ರ ವೈದಕೀಯ ಸಂಕೀರ್ಣತೆಗೆ ಒಳಗಾಗಿದ್ದು ನಾಲ್ಕು ಬಾಣಂತಿ ಸಾವಿಗೆ ಕಾರಣವಾಗಿದ್ದನ್ನು ಪತ್ತೆ ಹಚ್ಚಿದೆ ಎಂದು ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ

ಆದರೆ ತನಿಖಾ ಸಂದರ್ಭದಲ್ಲಿ ವೈದ್ಯಾಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿತನ ಎಲ್ಲಿಯೂ ಕಂಡು ಬಂದಿಲ್ಲ. ಆದರೆ ಬಳಕೆಯಾದ ಕೆಲ ಉತ್ಪನ್ನಗಳ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಆ ಬಗ್ಗೆ ವೈಜ್ಞಾನಿಕ ವರದಿ ನಿರೀಕ್ಷಿಸಲಾಗುತ್ತಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಇನ್ನು ನಾನು ಆರೋಗ್ಯ ಸಚಿವನಾದ ಬಳಿಕ ತಂದ ಸುಧಾರಣೆ ಹಾಗೂ ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ವಿವರಣೆ ನೀಡಿದರೆ ಅದು ನಿಮ್ಮಲ್ಲಿ ಇನ್ನಷ್ಟು ಅಸಹನೆ ಸೃಷ್ಟಿಸಬಹುದು. ಸದ್ಯಕ್ಕೆ ಇಷ್ಟು ಸಾಕು. ನಿಮ್ಮ ಅಧಿಕಾರಾವಧಿಯಲ್ಲಿ ಆರೋಗ್ಯ ಇಲಾಖೆ ಎಂಥ ಸಮರ್ಥರ ಕೈಯಲ್ಲಿತ್ತು. ಆಗ ಮಾಡಿದ ಅನಾಹುತಗಳೇನು ಎಂಬುದು ನನಗಿಂತಲೂ ನೀವೆ ಚೆನ್ನಾಗಿ ಅರಿತಿದ್ದು ವಿಷಯ ತಜ್ಞರ ಸಾಲಿನಲ್ಲಿ ಇದ್ದೀರೆಂದು ಭಾವಿಸಿದ್ದೇನೆ ಎಂದು ಅವರು ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News