ಬಿಜೆಪಿಯಲ್ಲಿ ನಿಲ್ಲದ ಭಿನ್ನರ ಬೇಗುದಿ: ಕ್ರಮಕ್ಕೆ ಆಗ್ರಹಿಸಿ ವರಿಷ್ಠರಿಗೆ ಪತ್ರ
ಬೆಂಗಳೂರು: ಮೂರು ಕ್ಷೇತ್ರಗಳ ಉಪಚುನಾವಣೆ ಸೋಲಿನ ಬೆನ್ನಲ್ಲೇ ಪ್ರತಿಪಕ್ಷ ಬಿಜೆಪಿಯಲ್ಲಿ ಬಂಡಾಯದ ಬೇಗುದಿ ತಾರಕಕ್ಕೇರಿದ್ದು, ಶಾಸಕ ಯತ್ನಾಳ್ ಹಾಗೂ ರಾಜ್ಯಾಧ್ಯಕ್ಷ ವಿಜಯೇಂದ್ರ ಬೆಂಬಲಿಗರ ನಡುವೆ ವಾಗ್ಯುದ್ಧ ನಡೆಯುತ್ತಿದೆ. ‘ಭಿನ್ನರ’ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವರಿಷ್ಠರಿಗೆ ‘ಪತ್ರ ಚಳವಳಿ’ ಆರಂಭಿಸಿದ್ದಾರೆ.
ಈ ಮಧ್ಯೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ‘ವಕ್ಫ್ ಆಸ್ತಿ ವಿಚಾರದಲ್ಲಿ ಯತ್ನಾಳ್ ನೇತೃತ್ವದ ತಂಡ ನಡೆಸುತ್ತಿರುವ ಹೋರಾಟಕ್ಕಿಂತ ಬಿಜೆಪಿಯ ನಾಯಕ ನಡುವಿನ ಭಿನ್ನಮತವೇ ಹೆಚ್ಚು ಸದ್ದು ಮಾಡುತ್ತಿರುವುದು ಸರಿಯಲ್ಲ. ಕೋರ್ ಕಮಿಟಿ ಅಧ್ಯಕ್ಷನಾಗಿ ಹೈಕಮಾಂಡ್‍ಗೆ ಎರಡು ಬಾರಿ ಪತ್ರ ಬರೆದರೂ ಯಾವುದೇ ಕ್ರಮ ಜರುಗಿಸಿಲ್ಲ’ ಎಂದು ಆಕ್ಷೇಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಯತ್ನಾಳ್, ‘ಸದಾನಂದಗೌಡ ಬಾಯಿ ಮುಚ್ಚಿಕೊಂಡು ಇರಬೇಕು. ಇಲ್ಲವಾದರೆ ಬಂಡವಾಳ ಬಯಲು ಮಾಡುವೆ. ಬಿಎಸ್‍ವೈ ಕುಟುಂಬದ ವಿರುದ್ಧ ಸದಾನಂದಗೌಡ ಮಾತನಾಡಿರುವುದು ಬಿಚ್ಚಿಡುವೆ. ನಾನು ವಕ್ಫ್ ಆಸ್ತಿ ವಿಚಾರ ಮಾತನಾಡಿದರೆ ಸದಾನಂದಗೌಡರಿಗೆ ಗಾಬರಿ ಏಕೆ’ ಎಂದು ಡಿವಿಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ದೀಪ ಆರುವವರ ಬಗ್ಗೆ ನಾನು ಮಾತನಾಡಲ್ಲ. ಸದಾನಂದಗೌಡ ದೀಪ ಈಗಾಗಲೇ ನಂದಿದೆ. ನಾನು ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ‘ನಿನಗೂ ನಿನ್ನ ನಾಲಿಗೆಗೂ ಎತ್ತ ಸಂಬಂಧವಯ್ಯ..’ ಇದು ಹೊಸ ವಚನ’ ಎಂದ ಯತ್ನಾಳ್, ಬಿಎಸ್‍ವೈ ವಿರುದ್ಧ ಸದಾನಂದಗೌಡ ಕೆಟ್ಟದಾಗಿ ಮಾತನಾಡಿದ್ದಾರೆ. ಇಲ್ಲ ಅನ್ನುವುದಾದರೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ ಎಂದು ಸವಾಲು ಹಾಕಿದರು.
ಡಿ.3ಕ್ಕೆ ಕೋರ್ ಕಮಿಟಿ ಸಭೆ: ಬಿಜೆಪಿಯಲ್ಲಿ ಬಣ ಬಡಿದಾಟದ ಮಧ್ಯೆಯೇ ಡಿಸೆಂಬರ್ 3ಕ್ಕೆ ಪಕ್ಷದ ಕೋರ್ ಕಮಿಟಿ ಸಭೆ ನಡೆಯಲಿದೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ರಾಧಾ ಮೋಹನ್ ದಾಸ್, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಸಹಿತ ಹಲವು ಮುಖಂಡರು ಪಾಲ್ಗೊಳ್ಳಲಿದ್ದು, ಮಹತ್ವ ಪಡೆದುಕೊಂಡಿದೆ.
ಡಿ.9ರಿಂದ ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯಲಿದ್ದು, ಉಭಯ ಸದನಗಳಲ್ಲಿ ಚರ್ಚಿಸಬೇಕಾದ ವಿಷಯಗಳ ಬಗ್ಗೆ ಕೋರ್ ಕಮಿಟಿ ಸಭೆ ಚರ್ಚೆ ನಡೆಯಲಿದೆ. ಇದೇ ವೇಳೆ ಯತ್ನಾಳ್- ವಿಜಯೇಂದ್ರ ಬಣ ರಾಜಕೀಯದಿಂದ ‘ನಾನೊಂದು ತೀರ, ನೀನೊಂದು ತೀರ’ ಎಂಬಂತಾಗಿರುವ ಬಿಜೆಪಿ ಉಭಯ ಬಣಗಳ ನಡುವೆ ಸಮನ್ವಯ ಮೂಡಿಸಲು ಸಭೆ ಏನು ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
‘ನನಗೆ ನಿನ್ನೆ ದಿಲ್ಲಿಯಿಂದ ಕರೆ ಬಂದಿತ್ತು. ತಕ್ಷಣ ಹೊರಟು ಬಂದುಬಿಡಿ ಎಂದ ಆಹ್ವಾನಿಸಿದ್ದರು, ನಾನು ಬರುವುದಿಲ್ಲ ಎಂದು ಹೇಳಿದೆ. ನಮ್ಮದು ತಂಡವಿದೆ,. ನಾನೊಬ್ಬನೇ ಬರಲು ಸಾಧ್ಯವಿಲ್ಲ ಎಂದೆ. ವಕ್ಫ್ ಆಸ್ತಿ ಕಬಳಿಕೆ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಎಲ್ಲರನ್ನೂ ದಿಲ್ಲಿಗೆ ಕರೆಯಿರಿ ಆಗ ಬಂದು ರಾಜ್ಯದಲ್ಲಿ ಏನು ನಡೆದಿದೆ ಎಂದು ಹೇಳುತ್ತೇವೆ. ಒಬ್ಬರನ್ನು ಕರೆದು ಸಮಾಧಾನ ಮಾಡಲು ಆಗುವುದಿಲ್ಲ. ನಾನು ಯಾವುದಕ್ಕೂ ಹೆದರುವುದಿಲ್ಲ, ಕ್ಷಮಾಪಣೆ ಕೇಳುವುದಿಲ್ಲ ಎಂದಿದ್ದೇನೆ’
-ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ಶಾಸಕ
ಬಾಯಿಗೆ ಕಡಿವಾಣ ಹಾಕಿ:
‘ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಮತ್ತವರ ಕುಟುಂಬದ ವಿರುದ್ಧ ಹಾದಿ-ಬೀದಿಯಲ್ಲಿ ಮಾತನಾಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡೆಯಿಂದ ಕಾರ್ಯಕರ್ತರಿಗೆ ನೋವಾಗಿದ್ದು, ಕೂಡಲೇ ಅವರ ಬಾಯಿಗೆ ಕಡಿವಾಣ ಹಾಕಬೇಕು’ ಎಂದು ಕೋರಿ ಮಂಡ್ಯ ಮೂಲದ ಬಿಜೆಪಿ ಕಾರ್ಯಕರ್ತ ಪಕ್ಷದ ವರಿಷ್ಠರಿಗೆ ಪತ್ರ ಬರೆದಿದ್ದಾರೆ.