ಕಾಂಗ್ರೆಸ್‌ ಸರಕಾರದಿಂದ ಉತ್ತರ ಕರ್ನಾಟಕಕ್ಕೆ ಏನೂ ಸಿಕ್ಕಿಲ್ಲ : ಆರ್‌.ಅಶೋಕ್‌

Update: 2024-11-28 10:57 GMT

ಉತ್ತರ ಕರ್ನಾಟಕ ಭಾಗದ ಶಾಸಕರೊಂದಿಗೆ ಸಭೆ

ಬೆಂಗಳೂರು : "ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಉತ್ತರ ಕರ್ನಾಟಕಕ್ಕೆ ಏನೂ ಸಿಕ್ಕಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಬಗ್ಗೆ ನಾನೂ ಸೇರಿದಂತೆ ಉತ್ತರ ಕರ್ನಾಟಕದ ಎಲ್ಲ ಶಾಸಕರು ಮಾತನಾಡಲಿದ್ದೇವೆ" ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದರು.

ಉತ್ತರ ಕರ್ನಾಟಕ ಭಾಗದ ಶಾಸಕರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಕಾಂಗ್ರೆಸ್‌ ಸರಕಾರ ಹಣ ಇದೆ ಎಂದು ಹೇಳುತ್ತಲೇ ಇದೆ. ಆದರೂ ಉತ್ತರ ಕರ್ನಾಟಕಕ್ಕೆ ಯಾವುದೇ ಅನುದಾನ ನೀಡಿಲ್ಲ. ಎಷ್ಟು ಹೂಡಿಕೆ ಬಂದಿದೆ, ಎಷ್ಟು ಬೆಳೆಹಾನಿ ಪರಿಹಾರ ಸಿಕ್ಕಿದೆ, ನೀರಾವರಿ ಯೋಜನೆಗೆ ಎಷ್ಟು ಅನುದಾನ ನೀಡಲಾಗಿದೆ ಎಂಬ ಬಗ್ಗೆ ಉತ್ತರ ಕರ್ನಾಟಕದ ಬಿಜೆಪಿ ಶಾಸಕರು ಚರ್ಚೆ ಮಾಡಿದ್ದಾರೆ. ನಂಜುಂಡಪ್ಪ ವರದಿಗೆ ಚಾಲನೆ ನೀಡುತ್ತೇವೆ ಎಂದು ಸರಕಾರ ಹೇಳಿ ವರ್ಷವಾಗುತ್ತಾ ಬಂದಿದೆ ಎಂಬುದು ಕೂಡ ಚರ್ಚೆಯಾಗಿದೆ. ಇದನ್ನು ಸದನದಲ್ಲಿ ಪ್ರಶ್ನಿಸುವ, ಮಾತನಾಡುವ ಬಗ್ಗೆ ಶಾಸಕರು ಹೇಳಿದ್ದಾರೆ. ಕಾಂಗ್ರೆಸ್‌ ಹೇಳಿದ್ದು ಏನು, ಉತ್ತರ ಕರ್ನಾಟಕಕ್ಕೆ ನೀಡಿದ್ದೇನು ಎಂಬ ಬಗ್ಗೆ ಶಾಸಕರೇ ಮಾತನಾಡಲಿದ್ದಾರೆʼ ಎಂದು ತಿಳಿಸಿದರು.

ಸಾರಿಗೆ ಇಲಾಖೆ ನೌಕರರು ಬಂದ್‌ ಮಾಡುತ್ತೇವೆ ಎಂದು ಹೇಳಿದ್ದಾರೆ. ಅಬಕಾರಿ ಇಲಾಖೆ ಗುತ್ತಿಗೆದಾರರು ಕೂಡ ಬಂದ್‌ ಮಾಡಲು ಮುಂದಾಗಿದ್ದರು. ಈ ನಡುವೆ ರಸ್ತೆ ಅಭಿವೃದ್ಧಿ, ಆಸ್ಪತ್ರೆ ನಿರ್ಮಾಣ, ಬೆಳೆಹಾನಿ ಪರಿಹಾರ ಯಾವುದಕ್ಕೂ ಹಣ ಇಲ್ಲ. ಕಲ್ಯಾಣ ಕರ್ನಾಟಕಕ್ಕೆ ಆದ್ಯತೆ ನೀಡಲು ಕಲಬುರ್ಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗಿತ್ತು. ಆದರೆ ಈವರೆಗೆ ಯಾವುದೇ ಯೋಜನೆಯ ಕಾರ್ಯಾದೇಶವಾಗಿಲ್ಲ ಎಂದು ದೂರಿದರು.

ಲಂಚ ಕೇಳಿದ ಧ್ವನಿಮುದ್ರಣ ಈಗ ಬಿಡುಗಡೆಯಾಗಿದೆ :

ಅಬಕಾರಿ ಇಲಾಖೆಯಲ್ಲಿ ಪರವಾನಗಿಗೆ ಅರ್ಜಿ ಸಲ್ಲಿಸಿದಾಗ ಲಂಚ ಕೇಳಿದ ಧ್ವನಿಮುದ್ರಣ ಈಗ ಬಿಡುಗಡೆಯಾಗಿದೆ. ಕಾಂಗ್ರೆಸ್‌ ಕಾರ್ಯಕರ್ತ ಆಗಿರುವುದರಿಂದ ಶೇ.50 ರಿಯಾಯಿತಿ ಎಂದು ಅಧಿಕಾರಿ ಹೇಳಿದ್ದಾರೆ. ಇದು ಈಗ ಜಗಜ್ಜಾಹೀರಾಗಿದೆ. ಈ ಭ್ರಷ್ಟಾಚಾರದ ವಿರುದ್ಧವೂ ಬಿಜೆಪಿ ಹೋರಾಟ ಮಾಡಲಿದೆ. ಇಷ್ಟು ಸಾಕ್ಷಿ ಇದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರೆದ ಪುಸ್ತಕ ಎಂದು ಹೇಳುತ್ತಿದ್ದಾರೆ. ದಾಖಲೆ ನೀಡಿದರೆ ರಾಜೀನಾಮೆ ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಈಗ ಅವರು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News