ಉಪಚುನಾವಣೆ ಯಶಸ್ಸು: ಶೇ. 4ರ ಮುಸ್ಲಿಂ ಕೋಟಾ ಮರುಸ್ಥಾಪನೆಗೆ ಹೆಚ್ಚಿದ ಒತ್ತಡ
ಬೆಂಗಳೂರು: ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷದ ಬೆಂಬಲಕ್ಕೆ ಇರುವುದನ್ನು ಕಳೆದ ವಿಧಾನಸಭಾ ಚುನಾವಣೆ ಮತ್ತು ಇತ್ತೀಚಿನ ಉಪಚುನಾವಣೆ ಫಲಿತಾಂಶ ಸ್ಪಷ್ಟಪಡಿಸಿದೆ. ಇದರಿಂದಾಗಿ ಈ ಮೊದಲು ಮುಸ್ಲಿಂ ಸಮುದಾಯಕ್ಕೆ ಇದ್ದ ಶೇಕಡ 4ರ ಮೀಸಲಾತಿ ಕೋಟಾ ಮರುಸ್ಥಾಪನೆಗೆ ಕಾಂಗ್ರೆಸ್ ಪಕ್ಷದ ಮೇಲೆ ಸಮುದಾಯದ ಒತ್ತಡ ಹೆಚ್ಚುತ್ತಿದೆ.
ಕರ್ನಾಟಕದಲ್ಲಿ ಜಾರಿಯಲ್ಲಿದ್ದ ಈ ಮೀಸಲಾತಿಯನ್ನು ಹಿಂದಿನ ಬಿಜೆಪಿ ಸರ್ಕಾರ ಕಿತ್ತುಹಾಕಿತ್ತು. ಆದರೆ ಈ ನಿರ್ಧಾರಕ್ಕೆ ತಡೆಯಾಜ್ಞೆ ನೀಡಿರುವ ಸುಪ್ರೀಂಕೋರ್ಟ್ ನಲ್ಲಿ ಈ ಸಂಬಂಧದ ಪ್ರಕರಣ ಬಾಕಿ ಇದೆ. ಕೋಟಾ ರದ್ದುಪಡಿಸಿರುವ ಬಿಜೆಪಿ ಸರ್ಕಾರದ ಕ್ರಮ "ಅಸ್ಥಿರ ಹಾಗೂ ದೋಷಪೂರಿತ" ಎಂದು ಸುಪ್ರೀಂಕೋರ್ಟ್ 2023ರಲ್ಲಿ ಅಭಿಪ್ರಾಯಪಟ್ಟಿದ್ದರೂ, ಈ ವಿಚಾರ ವಿವಾದಾತ್ಮಕವಾಗಿಯೇ ಉಳಿದಿದೆ. ಈ ಮೀಸಲಾತಿಯನ್ನು ಯಾವಾಗ ಮರುಸ್ಥಾಪಿಸಲಾಗುತ್ತದೆ ಎನ್ನುವ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.
ಮೀಸಲಾತಿ ರದ್ದತಿ ಕಾಂಗ್ರೆಸ್ ಪಕ್ಷಕ್ಕೆ 2023ರ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಚುನಾವಣಾ ವಿಷಯವಾಗಿತ್ತು ಹಾಗೂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪಕ್ಷ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು.
ಮುಸ್ಲಿಂ ಕೋಟಾ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷದ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್, "ತಕ್ಷಣ ಇದರ ಮರುಸ್ಥಾಪನೆಯಾಗಲೇಬೇಕು; ಇದು ಸಮುದಾಯದ ಹಕ್ಕು" ಎಂದು ಪ್ರತಿಪಾದಿಸಿದ್ದಾರೆ. "ನಮ್ಮನ್ನು ಕೂಡಾ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯವೆಂದು ವರ್ಗೀಕರಿಸುವುದು ಅನಿವಾರ್ಯ" ಎನ್ನುವುದು ಅವರ ಸ್ಪಷ್ಟ ಅಭಿಮತ. ನ್ಯಾಯಾಲಯ ಸೂಕ್ಷ್ಮ ಪರಿಶೀಲನೆಯ ಬಳಿಕ ಮೀಸಲಾತಿಯನ್ನು ತಾರ್ಕಿಕಗೊಳಿಸಿದೆ. ಇದನ್ನು ರಾತ್ರೋರಾತ್ರಿ ನಮ್ಮಿಂದ ಕಿತ್ತುಕೊಳ್ಳುವಂತಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮುಸ್ಲಿಮರ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ ರಾಜ್ಯ ಸರ್ಕಾರ ಸಕ್ರಿಯವಾಗಿ ಪ್ರಕರಣದಲ್ಲಿ ಹೋರಾಡಬೇಕು. ಸುಪ್ರೀಂಕೋರ್ಟ್ನಿಂದ ನಮಗೆ ನ್ಯಾಯ ದೊರಕುತ್ತದೆ ಎಂಬ ವಿಶ್ವಾಸ ನಮ್ಮ ಸಮುದಾಯಕ್ಕೆ ಇದೆ ಎಂದು ಅವರು ಹೇಳಿದ್ದಾರೆ.